ಮಾನವ ದೈವ ದೇವರನ್ನು ಪೂಜಿಸಲು
ಗುಡಿಕಟ್ಟಿ ಸ್ಥಾನವನ್ನು ಕಲ್ಪಿಸಿದ. ಆ ಗುಡಿಯಲ್ಲಿ ದೇವರಿದ್ದಾರೆಂದು ಭಕ್ತಿಯಿಂದ ಬೇಡಿ ತನ್ನ ಸಮಸ್ಯೆಗಳಿಗೆ
ಪರಿಹಾರ ಕಂಡುಕೊಂಡ. ಆ ಮೂಲಕ ದೈವ ದೇವರ ಆಲಯಗಳು ಶೃದ್ದಾ ಭಕ್ತಿಯ ಕೇಂದ್ರಗಳಾಗಿ ಜನಮಾನಸದಲ್ಲಿ ನೆಲೆಯಾದವು.
ಪೂಜಿಸಲು ವಿವಿಧ ಸಂಪ್ರದಾಯ ಪದ್ದತಿಗಳನ್ನು ಹುಟ್ಟುಹಾಕಿ ಮುಂದಿನ ಪೀಳಿಗೆಗೆ ದಾರಿ ತೋರಿಸಿಕೊಟ್ಟರು.
ಕಾಲಕ್ರಮೇಣ ಪರಿಸ್ಥಿತಿ ಬದಲಾದಂತೆ
ಕಷ್ಟವನ್ನು ನೀವಾರಿಸುವನೆಂಬ ದೈವಿಕ ಭಾವನೆಯಿಂದ ನಿವೇದಿಸುವ ನೂರಾರು ಭಕ್ತರು ಒಂದೆಡೆಯಾದರೆ, ಇನ್ನೊಂದೆಡೆ
ತಮಗೆ ಯಾವುದೇ ಅರಿವಿಲ್ಲದ ಸ್ಥಿತಿಯಲ್ಲಿ ಮನೋರಂಜನೆ ಪಡೆಯುವ ಇನ್ನೊಂದು ವರ್ಗದ ಜನರು. ಅದು ಸಹ ದೈವ,ದೇವಸ್ಥಾನಗಳ
ಪರಿಸರದಲ್ಲೇ ಸಂಪ್ರಾದಾಯದ ಹೆಸರಲ್ಲಿ ಜೂಜು, ಕೋಳಿಅಂಕ, ತೆಂಗಿನಕಾಯಿ ಆಟದಂತಹ ಮನೋರಂಜನೆ.
ದೇವರನ್ನು ಪೂಜಿಸಲು ಭಕ್ತಿ
ಬೇಕೇ ವಿನಃ ಆಡಂಬರ ಅಲ್ಲ. ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರಾದಾಯಗಳು ಇಂದಿಗೂ
ಮುಂದುವರೆಯುತ್ತಿರುವುದು ಸಂಸ್ಕೃತಿಯ ರಕ್ಷಣೆಯಲ್ಲಿ ಒಳ್ಳೆಯ ಬೆಳವಣಿಗೆ. ಆದರೆ ಆ ಕಾಲಕ್ಕೆ ಹಿರಿಯರು
ಮಾಡಿದ ಎಲ್ಲಾ ವ್ಯವಸ್ಥೆಗಳು ಇಂದಿಗೂ ಸರಿಯಾಗುತ್ತದೆ ಎಂದು ನಾವು ಭಾವಿಸಿದರೆ ಅದು ಶುದ್ದ ಮೂಡನಂಬಿಕೆಯಾಗುತ್ತದೆ.
ಹಾಗಂತ ಹಿರಿಯರು ಕಟ್ಟಿದ ನಂಬಿಕೆಗಳನ್ನು ವಿಮರ್ಶಿಸಿದಾಗ ವೈಜ್ಞಾನಿಕ ಕಾರಣಗಳು ಇವೆ. ಅಮಾವಾಸ್ಯೆಯ
ರಾತ್ರಿಯಲ್ಲಿ ಹುಣಸೆ ಮರದ ಬುಡದಲ್ಲಿ ಮಲಗಬಾರದು ಎಂದು ಇವೆ. ವಿಜ್ಞಾನದ ದೃಷ್ಟಿಯಲ್ಲಿ ನೋಡಿದರೆ ಆ
ದಿನ ರಾತ್ರಿ ಇಂಗಾಲದ ಡೈ ಆಕ್ಸೈಡ್ ಹೆಚ್ಚು ಬಿಡುಗಡೆಯಾಗಿ ಮಲಗಿದ ವ್ಯಕ್ತಿಗೆ ಪ್ರಭಾವ ಬೀರುತ್ತದೆ
ಎಂಬುದು ನಿಜ. ಹೀಗೆ ಕೆಲವೊಂದು ಹಿರಿಯರು ಹಾಕಿದ ನಿರ್ಬಂದಗಳಲ್ಲಿ ಒಳ್ಳೆಯ ಅಂಶಗಳು ಇವೆ.
ಅಜ್ಜ ನೆಟ್ಟ ಆಲದ ಮರಕ್ಕೆ
ಜೋತು ಬಿದ್ದು ಸುಮ್ಮನಾಗುವವರು ನಾವು. ಸಂಪ್ರದಾಯದ ಹಿಂದೆ ಮುಂದೆ ಏನಿದೆ ಅಂತ ನೋಡಲು ಕೂಡಾ ಹೋಗುವುದಿಲ್ಲ.
ಅದರ ಪರಿಣಾಮ ಸಂಪ್ರದಾಯ ಮಾತ್ರ ಉಳಿದಿದೆ. ಅದರ ಹಿಂದಿನ ಸತ್ಯ ಹಿನ್ನೆಲೆ ನಶಿಸಿ ಹೋಗಿದೆ. ಪ್ರಶ್ನೆ
ಮಾಡಿಕೊಂಡು ಇಂದಿಗೆ ಎಷ್ಟು ಅದು ಸರಿ ಎಂದು ಯೋಚಿಸಿ ಆಚರಿಸಿದರೆ ಸಂಪ್ರದಾಯಗಳಿಗೂ ಒಂದು ಅರ್ಥವಿರುತ್ತದೆ.
ಇತ್ತಿಚೆಗೆ ಜನರಲ್ಲಿ ಸಮಾಜ
ಬಾಹಿರ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿರುವುದು ಒಳ್ಳೆಯ ಬೆಳವಣಿಗೆ. ಧಾರ್ಮಿಕ ಕೇಂದ್ರಗಳ ಆಚರಣೆಯ,
ಸಂಪ್ರದಾಯಗಳ ಹೆಸರಿನಲ್ಲಿ ಕೋಳಿ ಅಂಕ, ಜೂಜು, ಮದ್ಯ ಸೇವನೆ ನಡೆಯುವುದು ಮತ್ತೆ ಜನರನ್ನು ಹೀನ ಸ್ಥಿತಿಗೆ
ತಳ್ಳುವಂತಿದೆ.
ಹಿಂದೆ ಹಳ್ಳಿಯಲ್ಲಿ ಜನರು
ಮೂಕ ಪ್ರಾಣಿಗಳೊಟ್ಟಿಗೆ ಇಟ್ಟ ಪ್ರೀತಿ ಕಾಲಕ್ರಮೇಣ ಆ ಪ್ರಾಣಿಗಳನ್ನೆ ಆಟದ ವಸ್ತುಗಳಾಗಿ ಬಳಸಿ ಆ ಮೂಲಕ
ಮನೋರಂಜನೆ ಪಡೆಯುತ್ತಿದ್ದರು. ಅಂದಿನ ದಿನಗಳಲ್ಲಿ ಮನೋರಂಜನೆಗೆ ಬೇರೆ ಮಾದ್ಯಮದ ಕೊರತೆಯಿಂದಲೊ, ಕೋಳಿ
ಅಂಕ, ಕಂಬಳ, ತೆಂಗಿನಕಾಯಿ ಆಟ, ಜೂಜು ಪ್ರಧಾನ ಆಟಿಕೆಗಳಾದವು. ಮುಂದುವರೆದಂತೆ ಮನೋರಂಜನಾ ಆಟಗಳು ಹಣ
ಗಳಿಸುವ ವೃತ್ತಿಯಾಗಿ, ಸ್ಪರ್ಧೆಗಳಾದವು. ಅದರೊಟ್ಟಿಗೆ ಮದ್ಯದ ಅಮಲು ಸೇರಿಕೊಂಡು ಒಂದು ಸಾಮಾಜಿಕ ಸiಸ್ಯೆಗೆ
ದಾರಿ ಮಾಡಿತು. ಇದರಿಂದ ಜನರ ಮಧ್ಯೆ ದ್ವೇಷ, ಸಂಘರ್ಷಗಳೆ ನಡೆಯುತ್ತದೆ ಹೊರತು ಮನೋರಂಜನೆಯೆಂಬುದು
ಮರೆಯಾಯಿತು. ಇದರಿಂದಾಗಿ ಹಲವಾರು ಕುಟುಂಬಗಳು ಬೀದಿಗೆ ಬಿದ್ದ ಘmನೆಗಳು ನಡೆದಿವೆ. ಹೆಂಡತಿ ಮಕ್ಕಳು
ಊಟಕ್ಕೆ ಅನ್ನವಿಲ್ಲದೆ ಯಾತನೆ ಅನುಭವಿಸಿವೆ. ಈ ಸಮಾಜ ಬಾಹಿರ ಶಕ್ತಿಯ ವಿರುದ್ದ ನಿರ್ಬಂಧ ಹಾಕಿರುವುದರಿಂದ
ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಆದರೆ ದೈವಸ್ಥಾನದ ಸಂಪ್ರದಾಯದ ಹೆಸರಿನಲ್ಲಿ
ಇಂದಿಗೂ ನಡೆಯುತ್ತಿರುವುದು ಜಾಗೃತಿಯ ಕೊರತೆ ಕಾಣುತ್ತಿದೆ. ಜಾತ್ರೆಗಳ ಸಂದರ್ಭದಲ್ಲಿ ಹಿಂದೆ ಮನೋರಂಜನೆಗೆ
ಬೇರೆ ದಾರಿ ಇಲ್ಲದಿರುವುದರಿಂದ ಈ ಮಾರ್ಗವನ್ನು ಆಯ್ಕೆ ಮಾಡಿದ್ದರು. ಆದರೆ ಪ್ರಸ್ತುತ ಯೋಚಿಸಬೇಕಾದುದು
ಪ್ರಜ್ನಾವಂತರು. ಮನೋರಂಜನೆಗೆ ಅದೇ ಒಂದು ಮಾಧ್ಯಮವೇ?
ಆಧುನಿಕ ಜಗತ್ತಿನಲ್ಲಿ ಹಲವಾರು ಸಾಂಸ್ಕೃತಿಕ ವೇದಿಕೆಗಳು ಮನೋರಂಜನೆಯನ್ನೇ ನೀಡುತ್ತಿವೆ. ಯಕ್ಶಗಾನ, ನಾಟಕ,
ನೃತ್ಯ ಕಾರ್ಯಕ್ರಮಗಳು ಇವೆಲ್ಲವೂ ಮನಸ್ಸಿಗೆ ಮುದವನ್ನು ನೀಡುತ್ತವೆ. ಕೋಳಿ ಅಂಕ, ತೆಂಗಿನಕಾಯಿ ಆಟದಂತಹ
ಮನೋರಂಜನೆಯನ್ನು ಸಮರ್ಥಿಸುವವರು ಇರಬಹುದು. ಆದರೆ ಇದರಿಂದ ಸಮಾಜ ಬಾಹಿರ ಚಟುವಟಿಕೆಗಳು ಹೆಚ್ಚಾಗಿ
ನಡೆಯುತ್ತಿದೆ.
ಧಾರ್ಮಿಕ ಕೇಂದ್ರಗಳು ಶೃದ್ದೆ,
ಭಕ್ತಿಯ ಕೇಂದ್ರಗಳಾಗಬೇಕೇ ವಿನಃ ಅನೈತಿಕ ಕೇಂದ್ರವಾಗಬಾರದು. ಇನ್ನು ದೈವ, ಪ್ರೇತಗಳ ಹೆಸರಲ್ಲಿ ಮಧ್ಯ,
ಸಾರಾಯಿ ಇಡುವ ಸಂಪ್ರದಾಯವು ಅತ್ಯಂತ ಕೆಟ್ಟ ಪದ್ದತಿಯಾಗಿದೆ. ದೈವಗಳಿಗೆ ಹೂ, ಹಿಂಗಾರ, ಸೀಯಾಳ ಪ್ರೀಯವಾದವುಗಳೇ
ಹೊರತು ಮಧ್ಯ ಸಾರಾಯಿ ಮಾನವ ನಿರ್ಮಿತ. ಶುದ್ದದಿಂದ ಕುಳಿತ ದೈವದ ಪಾತ್ರಿಗಳು ಮಧ್ಯ ಸೇವಿಸಿ ಅಗೆಲು
ಬಡಿಸಿದರೆ ದೈವಗಳಿಗೆ ತೃಪ್ತಿಯಾದಿತೆ? ಅಗೆಲು ಬಡಿಸಿಟ್ಟು ಮದ್ಯದ ಬಾಟಲಿ ಮೇಲೆ ಹೊಂಚು ಹಾಕಿದರೆ?
ಪ್ರತಿಯೊಂದು ಸಂಪ್ರದಾಯಗಳನ್ನು
ಆಚರಿಸುವಾಗ ಅದರ ಹಿನ್ನೆಲೆ ಮತ್ತು ಉಪಯೋಗ ತಿಳಿಯಬೇಕು. ಸುಮ್ಮನೆ ಹಿರಿಯರು ಆಚರಿಸಿದರು ಅಂತ ನಾವು
ಪಾಲನೆ ಮಾಡುವುದು ಎಷ್ಟು ಸರಿ? ಹಿರಿಯರು ಅದರ ಹಿನ್ನೆಲೆ ಮತ್ತು ಉಪಯೋಗ ತಿಳಿಸದೆ, ಸಂಪ್ರದಾಯಗಳನ್ನು
ಭೋದಿಸಿದರು. ಅದನ್ನು ಪ್ರಶ್ನಿಸಿದರೆ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿತ್ತು.
ಸಂಪ್ರದಾಯಗಳು ಕಾಲ ಕ್ರಮೇಣ
ನಶಿಸುತ್ತದೆ ಎಂದು ನಾವು ಹೇಳುತ್ತಿದ್ದೆವೆ. ಹಿಂದಿನವರು ಮಾಡಿದ್ದು ಶತಮಾನಗಳಿಗೂ ಅನ್ವಯವಾಗುತ್ತದೆ
ಅನ್ನುವ ಪೊಳ್ಳು ನಂಬಿಕೆಯಿಂದ ನಾವು ಕೂಪದಲ್ಲಿ ಬಿದ್ದಿದೇವೆ. ಪ್ರಶ್ನೆ ಮಾಡಿದರೆ ಹಿರಿಯರಿಗೆ ಅಗೌರವವೆಂದು
ಭಾವಿಸಿ ಸುಮ್ಮನೆ ಕಾಟಾಚಾರವಾಗಿ ಆಚರಿಸುತ್ತಿದ್ದೇವೆ. ಅದಕ್ಕೆ ಸಂಸ್ಕೃತಿ ಎಂಬ ಹೆಸರು ಕೂಡಾ ಕೊಟ್ಟಿದ್ದೇವೆ.
ದುರಂತವೆಂದರೆ ಅನೇಕ ಸುಧಾರಕರು,
ಮಹಾಪ್ಪುರುಷರು ಬಂದು ಹೋದರೂ ನಾವು ಬದಲಾಗಿಲ್ಲ. ನಾಯಿ ಬಾಲ ಡೊಂಕು ಅನ್ನುವ ಹಾಗೆ ಮಹಾತ್ಮರ ಅನುಯಾಯಿ
ಎಂದು ಗುರುತಿಸಿಕೊಂಡು, ಗುಡಿ ಕಟ್ಟಿ ಭಾವಚಿತ್ರ ಇಟ್ಟು ಅವರ ಮಾತುಗಳನ್ನು ಅನುಸರಿಸದೆ ನಾವು ಹಾಗೆಯೆ
ಗೊಡ್ಡು ಸಂಪ್ರದಾಯಗಳಿಗೆ ಜೋತು ಬಿದ್ದಿದ್ದೇವೆ. ಹಾಗಾದರೆ ಯಾವುದು ಮೂಡನಂಬಿಕೆ? ಎನ್ನುವ ಪ್ರಶ್ನೆ
ಮೂಡುವುದು ಸಹಜ!
ಮಾನವ ವಿಕಸನ ಹೊಂದಿದ ಹಾಗೆ
ಅನೇಕ ಪದ್ದತಿ ಮತ್ತು ಸಂಪ್ರದಾಯಗಳನ್ನು ಸೃಷ್ಟಿ ಮಾಡಿದ, ಅಂದರೆ ಅದು ಬದಲಾವಣೆಯ ಹಂತದ ಒಂದು ಪಾತ್ರವಿರಬಹುದು.
ಆ ಸಮಯಕ್ಕೆ ತಕ್ಕ ಹಾಗೆ ಅದನ್ನು ರೂಪಿಸಿರಬಹುದು. ಆದರೆ ಅದನ್ನು ಶತಮಾನ ಕಳೆದ ಮೇಲೂ ಸುಮ್ಮನೆ ಅನುಸರಿಸಿಕೊಂಡು
ಬಂದರೆ ಅದು ವಿಪರ್ಯಾಸವೆನಿಸುವುದಿಲ್ಲವೆ?