Friday, 31 January 2014

ಸಾಂತ್ವನ ನೀಡಿ

ಬಾನ ಮಂದಿರದಲ್ಲಿ ಹಾರಾಡೊ ನಕ್ಷತ್ರಗಳೆ
ಜೊತೆಯಾಗಿ ಬಂದಿಲ್ಲಿ ಭಾವ ಮಂದಿರ
ದೊಳಗೆ ಬೆಳಕಾಗಿ ಆವರಿಸಿ ಮುಡಿರುವ
ಕಗ್ಗತ್ತಲನ್ನು ದೂರಗೊಳಿಸಿ ಸಂತೈಸಿ...

ಬರಿ ನೆನಪು


ಕಳೆದು ಹೋದ ರಾತ್ರಿಗಳು
ಕನಸು ಕಂಡ ಗಳಿಗೆಗಳು
ಚಡಪಡಿಸಿದ ಆತಂಕ
ಒಲವಿನ ಸಾಂತ್ವನ
ಹಾರೈಕೆಯ ಮಾತು
ಬರಿ ನೆನಪುಗಳ ಸಂತೆ
ಮುಗಿದ ಮೇಲೆ
ಎಲ್ಲವೂ ಖಾಲಿ.

Wednesday, 26 June 2013

ತಿರುಗಿ ಬರುವೆಯಾ ಗೆಳತಿ

ಎಲ್ಲಿರುವೆ ಗೆಳತಿ
ನಾ ನಿನಗಾಗಿ ಕಾದಿಹೆನು
ಬಾಯಾರಿ ನಿನ್ನ ಪ್ರೀತಿ
ಮಳೆ ಹನಿಗಾಗಿ ಕಾದಿರುವ
ಚಾತಕ ಪಕ್ಷಿಯಂತೆ
ತಿರುಗಿ ಬರುವೆಯಾ ಗೆಳತಿ..

                               ನೂರಾರು ಕನಸುಗಳು
                               ಕಂಗಳಲಿ ತುಂಬಿರಲು
                               ಹಿಡಿದಿರುವೆನು ಬೊಗಸೆಯನ್ನು
                               ಪ್ರೀತಿ ತುಂಬಿದ ಹೃದಯದಿ
                               ಅಮೃತಧಾರೆಯ ಸವಿಯಲು
                               ತಿರುಗಿ ಬರುವೆಯಾ ಗೆಳತಿ...

ನೀನಿಲ್ಲದೆ ಪ್ರತಿಕ್ಷಣವು
ಬೆಂದಿರುವೆನು ನೆನಪುಗಳಲಿ
ಜೊತೆ ಸೇರಲು ಕನವರಿಕೆಗಳು
ಮೂಡಿವೆ ಕನಸುಗಳಲಿ
ಹರಿವ ತೊರೆಗಳಂತೆ..
ತಿರುಗಿ ಬರುವೆಯಾ ಗೆಳತಿ...

                              ಗೊತ್ತು ನನಗೆ ಬಂದೆ ಬರುತ್ತಿಯಾ...!
                              ಹುಣ್ಣಿಮೆಯ ಚಂದಿರನಂತೆ
                              ನೀಲಿ ಬಾನಲಿ ಮೂಡುವ
                              ಕಾಮನಬಿಲ್ಲಿನಂತೆ
                              ನಿನ್ನ ಆಗಮನದ ನಿರೀಕ್ಷೆಯಲ್ಲಿ...

ಒಡಲ ವಿಹಾರ

ಸುತ್ತಲು ಕವಿದಿದೆ ಕತ್ತಲು
ಎತ್ತ ಬೆಳಕು ಹರಿಯುವುದೋ
ಎಂಬ ನೋಟದಲ್ಲಿ
ನನ್ನವಳ ನೋಡುತ್ತಿದ್ದೆ
ಮಾರು ದಿಗಂತದಲ್ಲಿ

                     ಚಿಟ್ಟೆಯಾಗಿ, ದುಂಬಿಯಾಗಿ
                     ಹಾರುವ ಹಕ್ಕಿಯಾಗಿ
                     ಮಿನುಗುವ ಆ ಜ್ಯೋತಿ
                     ಕಣ್ಣಂಚಲಿ ನಾಟ್ಯವಾಡುತ್ತಿತ್ತು

ಎಲ್ಲಿ ಮರೆಯಾಗುವುದೋ
ಎಂಬ ತವಕದಲ್ಲಿ
ಎಲ್ಲಿ ಕಳೆದುಕೊಳ್ಳುವೆನೊ
ಎಂಬ ಚಿಂತೆಯು
ಮರೆಯಲಿ ಮನೆ ಮಾಡಲು
ಚಂದ್ರನೆ ಸರಿದಾಡಿ
ನನ್ನಯ ಕಣ್ಗಳಿಗೆ
ಸುಖ ನಿದ್ದೆಯ ಆವರಿಸಿ
ವಿಹರಿಸಲು ಅನುವಿತ್ತ....

Tuesday, 25 June 2013

ಇಳಿದು ಬಾ ಧರೆಗಿಳಿದು ಬಾ


ಕಾಡುತಿದೆ ನಿನ್ನೆಯ ದಿನವು
ಮಡಿಲಲಿ ಮಗುವಾದ ಆ ಕ್ಷಣವು
ಬೆಚ್ಚಗೆ ಮಲಗಿದೆ ಅಪ್ಪುಗೆಯಲಿ
ಎಲ್ಲವ ಮರೆತಿಹೆ ಪ್ರೀತಿಯಲಿ
ಮೌನವೆ ಬಯಸಿತು ಎಲ್ಲವನೂ
ತುಟಿಯಂಚಲಿ ಮರೆಯಾದ ಮಾತಿನಲಿ
                             ಇಂದು ನಾ ಒಂದು ತೀರಾ
                             ನೀ ತುಸು ದೂರ
                             ನಿನ್ನ ನೆನಪಲಿ ಈಗ 
                             ಹಂಬಲಿಸುತ್ತಿರುವೆ
                             ಕನವರಿಸುತಿರುವೆ
ನೂರು ಭಾವಗಳಿರುವ
ಸ್ವಾರ್ಥ ಇರದ ಕ್ಷಣಗಳೆ
ಕೊನೆಯಾಗಿ ಜೊತೆಯಾಗಿ ಇರಲಿ
ನನ್ನ ಪಯಣದ ಬಿಸಿಲಿಗೆ ನೆರಳಾಗಿ
ನಿದ್ದೆ ಬಾರದ ರಾತ್ರಿಗೆ ಕನಸಾಗಿ
ಉಳಿದು ಬಿಡಲಿ ಮಧುರ ಸವಿ
ಪೂರ್ಣ ಚಂದಿರ ನೀನಾಗು
 ನಿನ್ನಯ ಮುದ್ದಾದ ಮೊಗಕ್ಕೆ
 ಹಚ್ಚುವೆನು ನಕ್ಷತ್ರಗಳ ಬೆಳಕನು
 ಕತ್ತಲು ಕವಿಯಲು ಬಿಡದಿರಲು
 ನಿನ್ನಯ ಬಾಳಲಿ ಬೆಳಕಾಗುವೆನು





                   


   ಮೊಡದೊಳಗೆ ಅವಿತಿರಲು
   ನಿನ್ನಯ ಮೊಗವನು ಕಾಣದೆ
   ರೆಪ್ಪೆಯು ತುಂಬಿದೆ ಹನಿಗಳಲಿ
   ಒಮ್ಮೆ ಇಳಿದು ಬಾ ಅಭಿಸಾರಿಕೆಯೆ
   ನನ್ನಯ ಮನವಿಂದು ಹಾತೊರೆಯುತಿದೆ
   ಬರಡಾದ ಒಣ ಭುವಿಯಂತೆ
                                      ನಿನ್ನಯ ಹನಿ ಹನಿಯಲ್ಲೂ
                                      ನನ್ನಯ ಜೀವವೂ ಉಸಿರಾಡುತಿದೆ ಅಲೆದಾಡುತಿದೆ
                                      ಜೊತೆ ಸೇರಲು ಬಯಸಿದೆ
                                      ಇಳಿದು ಬಾ ಧರೆಗಿಳಿದು ಬಾ
                                      ಒಂದಾಗುವ ಬಾ....

Sunday, 23 June 2013

ಧಾರ್ಮಿಕ ಕೇಂದ್ರದ ಸುತ್ತ ಅಧಾರ್ಮಿಕತೆ !


ಮಾನವ ದೈವ ದೇವರನ್ನು ಪೂಜಿಸಲು ಗುಡಿಕಟ್ಟಿ ಸ್ಥಾನವನ್ನು ಕಲ್ಪಿಸಿದ. ಆ ಗುಡಿಯಲ್ಲಿ ದೇವರಿದ್ದಾರೆಂದು ಭಕ್ತಿಯಿಂದ ಬೇಡಿ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ. ಆ ಮೂಲಕ ದೈವ ದೇವರ ಆಲಯಗಳು ಶೃದ್ದಾ ಭಕ್ತಿಯ ಕೇಂದ್ರಗಳಾಗಿ ಜನಮಾನಸದಲ್ಲಿ ನೆಲೆಯಾದವು. ಪೂಜಿಸಲು ವಿವಿಧ ಸಂಪ್ರದಾಯ ಪದ್ದತಿಗಳನ್ನು ಹುಟ್ಟುಹಾಕಿ ಮುಂದಿನ ಪೀಳಿಗೆಗೆ ದಾರಿ ತೋರಿಸಿಕೊಟ್ಟರು.

ಕಾಲಕ್ರಮೇಣ ಪರಿಸ್ಥಿತಿ ಬದಲಾದಂತೆ ಕಷ್ಟವನ್ನು ನೀವಾರಿಸುವನೆಂಬ ದೈವಿಕ ಭಾವನೆಯಿಂದ ನಿವೇದಿಸುವ ನೂರಾರು ಭಕ್ತರು ಒಂದೆಡೆಯಾದರೆ, ಇನ್ನೊಂದೆಡೆ ತಮಗೆ ಯಾವುದೇ ಅರಿವಿಲ್ಲದ ಸ್ಥಿತಿಯಲ್ಲಿ ಮನೋರಂಜನೆ ಪಡೆಯುವ ಇನ್ನೊಂದು ವರ್ಗದ ಜನರು. ಅದು ಸಹ ದೈವ,ದೇವಸ್ಥಾನಗಳ ಪರಿಸರದಲ್ಲೇ ಸಂಪ್ರಾದಾಯದ ಹೆಸರಲ್ಲಿ ಜೂಜು, ಕೋಳಿಅಂಕ, ತೆಂಗಿನಕಾಯಿ ಆಟದಂತಹ ಮನೋರಂಜನೆ.

ದೇವರನ್ನು ಪೂಜಿಸಲು ಭಕ್ತಿ ಬೇಕೇ ವಿನಃ ಆಡಂಬರ ಅಲ್ಲ. ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರಾದಾಯಗಳು ಇಂದಿಗೂ ಮುಂದುವರೆಯುತ್ತಿರುವುದು ಸಂಸ್ಕೃತಿಯ ರಕ್ಷಣೆಯಲ್ಲಿ ಒಳ್ಳೆಯ ಬೆಳವಣಿಗೆ. ಆದರೆ ಆ ಕಾಲಕ್ಕೆ ಹಿರಿಯರು ಮಾಡಿದ ಎಲ್ಲಾ ವ್ಯವಸ್ಥೆಗಳು ಇಂದಿಗೂ ಸರಿಯಾಗುತ್ತದೆ ಎಂದು ನಾವು ಭಾವಿಸಿದರೆ ಅದು ಶುದ್ದ ಮೂಡನಂಬಿಕೆಯಾಗುತ್ತದೆ. ಹಾಗಂತ ಹಿರಿಯರು ಕಟ್ಟಿದ ನಂಬಿಕೆಗಳನ್ನು ವಿಮರ್ಶಿಸಿದಾಗ ವೈಜ್ಞಾನಿಕ ಕಾರಣಗಳು ಇವೆ. ಅಮಾವಾಸ್ಯೆಯ ರಾತ್ರಿಯಲ್ಲಿ ಹುಣಸೆ ಮರದ ಬುಡದಲ್ಲಿ ಮಲಗಬಾರದು ಎಂದು ಇವೆ. ವಿಜ್ಞಾನದ ದೃಷ್ಟಿಯಲ್ಲಿ ನೋಡಿದರೆ ಆ ದಿನ ರಾತ್ರಿ ಇಂಗಾಲದ ಡೈ ಆಕ್ಸೈಡ್ ಹೆಚ್ಚು ಬಿಡುಗಡೆಯಾಗಿ ಮಲಗಿದ ವ್ಯಕ್ತಿಗೆ ಪ್ರಭಾವ ಬೀರುತ್ತದೆ ಎಂಬುದು ನಿಜ. ಹೀಗೆ ಕೆಲವೊಂದು ಹಿರಿಯರು ಹಾಕಿದ ನಿರ್ಬಂದಗಳಲ್ಲಿ ಒಳ್ಳೆಯ ಅಂಶಗಳು ಇವೆ.
ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬಿದ್ದು ಸುಮ್ಮನಾಗುವವರು ನಾವು. ಸಂಪ್ರದಾಯದ ಹಿಂದೆ ಮುಂದೆ ಏನಿದೆ ಅಂತ ನೋಡಲು ಕೂಡಾ ಹೋಗುವುದಿಲ್ಲ. ಅದರ ಪರಿಣಾಮ ಸಂಪ್ರದಾಯ ಮಾತ್ರ ಉಳಿದಿದೆ. ಅದರ ಹಿಂದಿನ ಸತ್ಯ ಹಿನ್ನೆಲೆ ನಶಿಸಿ ಹೋಗಿದೆ. ಪ್ರಶ್ನೆ ಮಾಡಿಕೊಂಡು ಇಂದಿಗೆ ಎಷ್ಟು ಅದು ಸರಿ ಎಂದು ಯೋಚಿಸಿ ಆಚರಿಸಿದರೆ ಸಂಪ್ರದಾಯಗಳಿಗೂ ಒಂದು ಅರ್ಥವಿರುತ್ತದೆ.
ಇತ್ತಿಚೆಗೆ ಜನರಲ್ಲಿ ಸಮಾಜ ಬಾಹಿರ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿರುವುದು ಒಳ್ಳೆಯ ಬೆಳವಣಿಗೆ. ಧಾರ್ಮಿಕ ಕೇಂದ್ರಗಳ ಆಚರಣೆಯ, ಸಂಪ್ರದಾಯಗಳ ಹೆಸರಿನಲ್ಲಿ ಕೋಳಿ ಅಂಕ, ಜೂಜು, ಮದ್ಯ ಸೇವನೆ ನಡೆಯುವುದು ಮತ್ತೆ ಜನರನ್ನು ಹೀನ ಸ್ಥಿತಿಗೆ ತಳ್ಳುವಂತಿದೆ.

ಹಿಂದೆ ಹಳ್ಳಿಯಲ್ಲಿ ಜನರು ಮೂಕ ಪ್ರಾಣಿಗಳೊಟ್ಟಿಗೆ ಇಟ್ಟ ಪ್ರೀತಿ ಕಾಲಕ್ರಮೇಣ ಆ ಪ್ರಾಣಿಗಳನ್ನೆ ಆಟದ ವಸ್ತುಗಳಾಗಿ ಬಳಸಿ ಆ ಮೂಲಕ ಮನೋರಂಜನೆ ಪಡೆಯುತ್ತಿದ್ದರು. ಅಂದಿನ ದಿನಗಳಲ್ಲಿ ಮನೋರಂಜನೆಗೆ ಬೇರೆ ಮಾದ್ಯಮದ ಕೊರತೆಯಿಂದಲೊ, ಕೋಳಿ ಅಂಕ, ಕಂಬಳ, ತೆಂಗಿನಕಾಯಿ ಆಟ, ಜೂಜು ಪ್ರಧಾನ ಆಟಿಕೆಗಳಾದವು. ಮುಂದುವರೆದಂತೆ ಮನೋರಂಜನಾ ಆಟಗಳು ಹಣ ಗಳಿಸುವ ವೃತ್ತಿಯಾಗಿ, ಸ್ಪರ್ಧೆಗಳಾದವು. ಅದರೊಟ್ಟಿಗೆ ಮದ್ಯದ ಅಮಲು ಸೇರಿಕೊಂಡು ಒಂದು ಸಾಮಾಜಿಕ ಸiಸ್ಯೆಗೆ ದಾರಿ ಮಾಡಿತು. ಇದರಿಂದ ಜನರ ಮಧ್ಯೆ ದ್ವೇಷ, ಸಂಘರ್ಷಗಳೆ ನಡೆಯುತ್ತದೆ ಹೊರತು ಮನೋರಂಜನೆಯೆಂಬುದು ಮರೆಯಾಯಿತು. ಇದರಿಂದಾಗಿ ಹಲವಾರು ಕುಟುಂಬಗಳು ಬೀದಿಗೆ ಬಿದ್ದ ಘmನೆಗಳು ನಡೆದಿವೆ. ಹೆಂಡತಿ ಮಕ್ಕಳು ಊಟಕ್ಕೆ ಅನ್ನವಿಲ್ಲದೆ ಯಾತನೆ ಅನುಭವಿಸಿವೆ. ಈ ಸಮಾಜ ಬಾಹಿರ ಶಕ್ತಿಯ ವಿರುದ್ದ ನಿರ್ಬಂಧ ಹಾಕಿರುವುದರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಆದರೆ ದೈವಸ್ಥಾನದ ಸಂಪ್ರದಾಯದ ಹೆಸರಿನಲ್ಲಿ ಇಂದಿಗೂ ನಡೆಯುತ್ತಿರುವುದು ಜಾಗೃತಿಯ ಕೊರತೆ ಕಾಣುತ್ತಿದೆ. ಜಾತ್ರೆಗಳ ಸಂದರ್ಭದಲ್ಲಿ ಹಿಂದೆ ಮನೋರಂಜನೆಗೆ ಬೇರೆ ದಾರಿ ಇಲ್ಲದಿರುವುದರಿಂದ ಈ ಮಾರ್ಗವನ್ನು ಆಯ್ಕೆ ಮಾಡಿದ್ದರು. ಆದರೆ ಪ್ರಸ್ತುತ ಯೋಚಿಸಬೇಕಾದುದು ಪ್ರಜ್ನಾವಂತರು. ಮನೋರಂಜನೆಗೆ ಅದೇ ಒಂದು ಮಾಧ್ಯಮವೇ?
 ಆಧುನಿಕ ಜಗತ್ತಿನಲ್ಲಿ ಹಲವಾರು ಸಾಂಸ್ಕೃತಿಕ  ವೇದಿಕೆಗಳು ಮನೋರಂಜನೆಯನ್ನೇ ನೀಡುತ್ತಿವೆ. ಯಕ್ಶಗಾನ, ನಾಟಕ, ನೃತ್ಯ ಕಾರ್ಯಕ್ರಮಗಳು ಇವೆಲ್ಲವೂ ಮನಸ್ಸಿಗೆ ಮುದವನ್ನು ನೀಡುತ್ತವೆ. ಕೋಳಿ ಅಂಕ, ತೆಂಗಿನಕಾಯಿ ಆಟದಂತಹ ಮನೋರಂಜನೆಯನ್ನು ಸಮರ್ಥಿಸುವವರು ಇರಬಹುದು. ಆದರೆ ಇದರಿಂದ ಸಮಾಜ ಬಾಹಿರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದೆ.

ಧಾರ್ಮಿಕ ಕೇಂದ್ರಗಳು ಶೃದ್ದೆ, ಭಕ್ತಿಯ ಕೇಂದ್ರಗಳಾಗಬೇಕೇ ವಿನಃ ಅನೈತಿಕ ಕೇಂದ್ರವಾಗಬಾರದು. ಇನ್ನು ದೈವ, ಪ್ರೇತಗಳ ಹೆಸರಲ್ಲಿ ಮಧ್ಯ, ಸಾರಾಯಿ ಇಡುವ ಸಂಪ್ರದಾಯವು ಅತ್ಯಂತ ಕೆಟ್ಟ ಪದ್ದತಿಯಾಗಿದೆ. ದೈವಗಳಿಗೆ ಹೂ, ಹಿಂಗಾರ, ಸೀಯಾಳ ಪ್ರೀಯವಾದವುಗಳೇ ಹೊರತು ಮಧ್ಯ ಸಾರಾಯಿ ಮಾನವ ನಿರ್ಮಿತ. ಶುದ್ದದಿಂದ ಕುಳಿತ ದೈವದ ಪಾತ್ರಿಗಳು ಮಧ್ಯ ಸೇವಿಸಿ ಅಗೆಲು ಬಡಿಸಿದರೆ ದೈವಗಳಿಗೆ ತೃಪ್ತಿಯಾದಿತೆ? ಅಗೆಲು ಬಡಿಸಿಟ್ಟು ಮದ್ಯದ ಬಾಟಲಿ ಮೇಲೆ ಹೊಂಚು ಹಾಕಿದರೆ?

ಪ್ರತಿಯೊಂದು ಸಂಪ್ರದಾಯಗಳನ್ನು ಆಚರಿಸುವಾಗ ಅದರ ಹಿನ್ನೆಲೆ ಮತ್ತು ಉಪಯೋಗ ತಿಳಿಯಬೇಕು. ಸುಮ್ಮನೆ ಹಿರಿಯರು ಆಚರಿಸಿದರು ಅಂತ ನಾವು ಪಾಲನೆ ಮಾಡುವುದು ಎಷ್ಟು ಸರಿ? ಹಿರಿಯರು ಅದರ ಹಿನ್ನೆಲೆ ಮತ್ತು ಉಪಯೋಗ ತಿಳಿಸದೆ, ಸಂಪ್ರದಾಯಗಳನ್ನು ಭೋದಿಸಿದರು. ಅದನ್ನು ಪ್ರಶ್ನಿಸಿದರೆ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿತ್ತು.

ಸಂಪ್ರದಾಯಗಳು ಕಾಲ ಕ್ರಮೇಣ ನಶಿಸುತ್ತದೆ ಎಂದು ನಾವು ಹೇಳುತ್ತಿದ್ದೆವೆ. ಹಿಂದಿನವರು ಮಾಡಿದ್ದು ಶತಮಾನಗಳಿಗೂ ಅನ್ವಯವಾಗುತ್ತದೆ ಅನ್ನುವ ಪೊಳ್ಳು ನಂಬಿಕೆಯಿಂದ ನಾವು ಕೂಪದಲ್ಲಿ ಬಿದ್ದಿದೇವೆ. ಪ್ರಶ್ನೆ ಮಾಡಿದರೆ ಹಿರಿಯರಿಗೆ ಅಗೌರವವೆಂದು ಭಾವಿಸಿ ಸುಮ್ಮನೆ ಕಾಟಾಚಾರವಾಗಿ ಆಚರಿಸುತ್ತಿದ್ದೇವೆ. ಅದಕ್ಕೆ ಸಂಸ್ಕೃತಿ ಎಂಬ ಹೆಸರು ಕೂಡಾ ಕೊಟ್ಟಿದ್ದೇವೆ.
ದುರಂತವೆಂದರೆ ಅನೇಕ ಸುಧಾರಕರು, ಮಹಾಪ್ಪುರುಷರು ಬಂದು ಹೋದರೂ ನಾವು ಬದಲಾಗಿಲ್ಲ. ನಾಯಿ ಬಾಲ ಡೊಂಕು ಅನ್ನುವ ಹಾಗೆ ಮಹಾತ್ಮರ ಅನುಯಾಯಿ ಎಂದು ಗುರುತಿಸಿಕೊಂಡು, ಗುಡಿ ಕಟ್ಟಿ ಭಾವಚಿತ್ರ ಇಟ್ಟು ಅವರ ಮಾತುಗಳನ್ನು ಅನುಸರಿಸದೆ ನಾವು ಹಾಗೆಯೆ ಗೊಡ್ಡು ಸಂಪ್ರದಾಯಗಳಿಗೆ ಜೋತು ಬಿದ್ದಿದ್ದೇವೆ. ಹಾಗಾದರೆ ಯಾವುದು ಮೂಡನಂಬಿಕೆ? ಎನ್ನುವ ಪ್ರಶ್ನೆ ಮೂಡುವುದು ಸಹಜ!

ಮಾನವ ವಿಕಸನ ಹೊಂದಿದ ಹಾಗೆ ಅನೇಕ ಪದ್ದತಿ ಮತ್ತು ಸಂಪ್ರದಾಯಗಳನ್ನು ಸೃಷ್ಟಿ ಮಾಡಿದ, ಅಂದರೆ ಅದು ಬದಲಾವಣೆಯ ಹಂತದ ಒಂದು ಪಾತ್ರವಿರಬಹುದು. ಆ ಸಮಯಕ್ಕೆ ತಕ್ಕ ಹಾಗೆ ಅದನ್ನು ರೂಪಿಸಿರಬಹುದು. ಆದರೆ ಅದನ್ನು ಶತಮಾನ ಕಳೆದ ಮೇಲೂ ಸುಮ್ಮನೆ ಅನುಸರಿಸಿಕೊಂಡು ಬಂದರೆ ಅದು ವಿಪರ್ಯಾಸವೆನಿಸುವುದಿಲ್ಲವೆ?

Thursday, 7 July 2011

ಶಾಲಾಬಿವೃದ್ದಿಯಲ್ಲಿ ಜನರ ಪಾಲ್ಗೊಳ್ಳುವಿಕೆ


      ಬೆಳೆಯುತ್ತಿರುವ ತಾಂತ್ರಿಕಮಯವಾದ ಆಧುನಿಕ ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿದ್ದು, ಶಿಕ್ಷಣ ಕ್ಷೇತ್ರವೂ ಕ್ಷಿಪ್ರಗತಿಯಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಜ್ಞಾನದ ಜೊತೆಗೆ ವ್ಯಕ್ತಿತ್ವದ ನಿರ್ಮಾಣಕ್ಕೆ ಕಲಿಕೆ ಅನ್ನುವಂತಹದು ಅತ್ಯಗತ್ಯವಾದದ್ದು. ಹಲವಾರು ಸಾಮಾಜಿಕ ಚಿಂತಕರು, ದಾರ್ಶನಿಕರು ಸಾಮಾಜಿಕ ಪರಿವರ್ತನೆಗೆ ಶೈಕ್ಷಣಿಕ ಜಾಗೃತಿ ಹಾಗೂ ಮಹತ್ವವನ್ನು ನೀಡಿರುವುದು ಇತಿಹಾಸದಲ್ಲಿ ಉಲ್ಲೇಖನೀಯವಾಗಿದೆ. ಪ್ರಾಚೀನ ಕಾಲದಲ್ಲಿ ಜ್ಞಾನಕ್ಕೋಸ್ಕರ ಪಡೆಯುತ್ತಿದ್ದ ಶಿಕ್ಷಣ ಇಂದು ವ್ಯಾಪಾರೀಕರಣದ  ಮನೋಭಾವನೆ ಬೆಳೆದಿರುವುದು ಚಿಂತನಾರ್ಹವಾಗಿದೆ. ಈ ಕಾರಣದಿಂದ ಇಂದು ಹಲವಾರು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡು ಸೇವೆಯ ಹೆಸರಿನಲ್ಲಿ ವ್ಯವಹಾರದ ಮಟ್ಟಕ್ಕೆ ಬೆಳೆದಿರುವುದು ಶೋಚನೀಯವಾಗಿದೆ.
ಇಂದು ಸರಕಾರಿ, ಅನುದಾನಿತ, ಅನುದಾನರಹಿತ ಎಂಬ ವರ್ಗ ಬೇಧ ಭಾವಗಳು ಬೆಳೆದಿದೆ. ಸರಕಾರಗಳು ಶೈಕ್ಷಣಿಕ ಗುಣಮಟ್ಟದಲ್ಲಿ ಏಕರೂಪತೆ ಮತ್ತು ಸಮಾನತೆಯನ್ನು ತರದಿರುವುದೇ ಈ ರೀತಿಯ ವರ್ಗೀಕರಣಕ್ಕೆ ಕಾರಣವಾಗಿದೆ. ಈ ರೀತಿಯ ಅಸಮಾನತೆಗಳಿಂದಾಗಿ ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸರಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯದ ಭಾವನೆ ಬೆಳೆದಿರುವುದು ಸರಕಾರಿ ಶಿಕ್ಷಣ ಸಂಸ್ಥೆಗಳ ಅಸ್ಥಿತ್ವದ ಪ್ರಶ್ನೆಯಾಗಿದೆ.
        ಹಲವಾರು ಗಣ್ಯ ನೇತಾರರಿಗೆ ಶಿಕ್ಷಣ ನೀಡಿ ಈ ರಾಷ್ಟ್ರದ ನಾಯಕರನ್ನಾಗಿ ಬೆಳೆಸಿದ ಸರ್ಕಾರಿ ಶಾಲೆಗಳು ಇಂದು ಬಡವರಿಗೆ ಮಾತ್ರ ಸೀಮಿತವಾಗಿ ಬಡವರ ಶಾಲೆಯೆಂದೆ ಅಭಿಪ್ರಾಯ ಮೂಡಿದೆ. ಸರ್ಕಾರಿ ಮತ್ತು ಕನ್ನಡ ಮಾಧ್ಯಮ ಶಾಲೆಗಳಿಗೆ ಇಂದು ಜನರು ನಿರುತ್ಸಾಹ ತೋರುತ್ತಿರುವುದು ಪರಭಾಷೆಯ ಅತಿಯಾದ ವ್ಯಾಮೋಹವನ್ನು ತಿಳಿಸುತ್ತದೆ. ಇದರಿಂದ ಬೆಳೆದಿರುವ ಉದ್ಯೋಗಾಧಾರಿತ ಶಿಕ್ಷಣ ,ಇಂದು ಇಂಗ್ಲೀಷ್ ಮಾಧ್ಯಮವೇ ಬದುಕು ರೂಪಿಸಿಕೊಡುತ್ತದೆ ಎಂಬ ಭಾವನೆ ಬೆಳೆಯುತ್ತಿದೆ. ಆದರೆ ವಾಸ್ತವಿಕವಾಗಿ ಭಿನ್ನವಾದುದು. ಕನ್ನಡ ಮಾಧ್ಯಮ, ಸರ್ಕಾರಿ ಶಾಲೆಗಳು ಕೂಡಾ ಗುಣಮಟ್ಟದಲ್ಲಿ ಶಿಕ್ಷಣ ನೀಡಬಲ್ಲುದು. ವಿದ್ಯಾರ್ಥಿಗಳ ಪ್ರತಿಭೆ, ಅಭಿರುಚಿ ಗುರುತಿಸಿ  ಪ್ರೋತ್ಸಾಹ ನೀಡಿ ಸರ್ವತೋಮುಖ ಅಭಿವೃದ್ಧಿಯಾಗಲು ಸರ್ಕಾರಿ ಶಾಲೆಗಳಿಂದಲೂ ಸಾಧ್ಯವಾಗಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾತ್ರವು ಇದೆ. ಗ್ರಾಮಸ್ಥರಲ್ಲಿ ನನ್ನ ಗ್ರಾಮ ನಮ್ಮ ಶಾಲೆ ಎಂಬ ಅಭಿಮಾನ  ಮೂಡಿದಾಗ ಒಂದು ಶಿಕ್ಷಣ ಸಂಸ್ಥೆ ಬೆಳೆಯಲು ಸಾಧ್ಯ. ಪ್ರಾಥಮಿಕ ಶಾಲೆಯ ಮುಖಾಂತರ ಸಮಾಜದ ಬೇರೆ ಬೇರೆ ವರ್ಗದ ಜನರನ್ನು ಒಂದುಗೂಡಿಸಲು ಒಂದು ವೇದಿಕೆಯಾಗಿದೆ. ಒಂದು ಶಿಕ್ಷಣ ಸಂಸ್ಥೆಯು ವಿದ್ಯಾದೇಗುಲವಾಗಿದೆ. ಅಲ್ಲಿ ಧರ್ಮ ಜಾತಿ ವರ್ಗಗಳ ಎಲ್ಲೆಯನ್ನು ಮೀರಿ ಸರ್ವರಿಗೂ ಜ್ಞಾನವನ್ನು ನೀಡುವ ಭಂಡಾರವಾಗಿದೆ. ಊರಿನ ಹಿರಿಯರು ಹಾಕಿದ ಭದ್ರ ಅಡಿಪಾಯದಿಂದ ಒಂದು  ಸಂಸ್ಥೆಯಾಗಿ ಬೆಳೆದು ಎಲ್ಲರನ್ನೂ ಅಕ್ಷರಸ್ಥರನ್ನಾಗಿ ಮಾಡುವ ಕೇಂದ್ರವಾಗಿದೆ.
        ಇಂದಿನ ಶಿಕ್ಷಣ ವ್ಯವಸ್ಥೆಯು ಒಂದು ರಥದ ನಾಲ್ಕು ಚಕ್ರವಿದ್ದಂತೆ, ಒಂದೊಂದು ಚಕ್ರವು ವಿದ್ಯಾರ್ಥಿ, ಶಿಕ್ಷಕರು, ಪೋಷಕರು, ಆಡಳಿತ ಮಂಡಳಿಯಾಗಿದ್ದು, ನಾಲ್ಕು ಚಕ್ರಗಳು ಸರಿಯಾದ ದಿಕ್ಕಿನಲ್ಲಿ ಚಲಿಸದಿದ್ದರೆ  ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ತೊಡಕಾಗುತ್ತದೆ. ಮುಂದಿನ ಎರಡು ಚಕ್ರಗಳು ಶಿಕ್ಷಕ ಮತ್ತು ವಿದ್ಯಾರ್ಥಿಯಾದರೆ ಹಿಂದಿನಲ್ಲಿ ಪೋಷಕರು ಮತ್ತು ಆಡಳಿತ ಮಂಡಳಿ ಶಾಲೆಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಗುಣಮಟ್ಟದ ನೀತಿ ನಿರೂಪಣೆಯಲ್ಲಿ ಪ್ರಮುಖರಾಗುತ್ತಾರೆ.
ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು, ಹಳೆವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯವರು ಉತ್ಸಾಹದಿಂದ ಭಾಗವಹಿಸುವ ಮೂಲಕ ಶಾಲೆಯ ಸರ್ವತೋಮುಖ ಬೆಳವಣಿಗೆಯಾಗುವುದು. ಜೊತೆಗೆ ಗ್ರಾಮಸ್ಥರೆಲ್ಲ ವಿವಿಧ ರೀತಿಯಲ್ಲಿ ಶಿಕ್ಷಕರೊಂದಿಗೆ ಕೊಂಡಿಯಾಗಿ, ಮಾರ್ಗದರ್ಶಕರಾಗಿ ಬೆರೆತು, ಶಾಲೆಯೊಂದು ಸಂಬಂಧವನ್ನು ಬೆಸೆಯುವ ಕೇಂದ್ರವಾಗಬೇಕು. ಶಾಲೆಯ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಪಕ್ಷಪಾತಗಳು ಬಾರದೆ ಎಲ್ಲರೂ ಏಕಮನಸ್ಸಿನಿಂದ ಸಂಸ್ಥೆಗೆ ಶ್ರಮಿಸಿದರೆ ಸಾಧನೆಯತ್ತ ಬೆಳೆಂiiಲು ಸಾಧ್ಯ.
ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಭ್ರಷ್ಟಚಾರ ರಹಿತವಾಗಿ ಉಪಯೋಗಿಸುವ ನಿರ್ಮಲ ಮನಸ್ಸುಗಳು ಬೆಳೆಯಬೇಕಾದುದು ಇಂದು ಅಗತ್ಯವಾಗಿದೆ. ಗ್ರಾಮದ ವಿದ್ಯಾಕೇಂದ್ರದ ಬೆಳವಣಿಗೆಯಲ್ಲಿ ಸ್ಥಳೀಯ ಸಂಸ್ಥೆಗಳು ಕೂಡಾ ತನ್ನದೆ ಆದ ಕೊಡುಗೆಯನ್ನು ನೀಡುವ ಮುಖಾಂತರ ಸಾಮಾಜಿಕವಾಗಿಯೂ ಬೆಳೆಯಲು ಸಾಧ್ಯವಾಗಿದೆ. ಸ್ಥಳಿಯ ಸಂಸ್ಥೆಗಳು ಕೂಡ ಶಾಲೆಯ ಜೊತೆಗೂಡಿ ಸಮುದಾಯದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ
       ಊರಿನ ಶಾಲಾ ವಾರ್ಷಿಕೋತ್ಸವವೆಂದರೆ ಕೇವಲ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ ಶಾಲಾಮಕ್ಕಳನ್ನು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಮತ್ತುಪ್ರೋತ್ಸಾಹಿಸುವ ವೇದಿಕೆಯಾಗಬೇಕು. ಹಳೆ ವಿದ್ಯಾರ್ಥಿಗಳು ಮಾತೃಸಂಸ್ಥೆಯ ಪೋಷಕರು. ಬಾಲ್ಯ ಜೀವನವನ್ನು ಮೆಲುಕು ಹಾಕುತ್ತಾ ಶಾಲೆಯ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸುವ ಮುಖಾಂತರ  ಶಾಲೆಯ ಬಗ್ಗೆ ಪ್ರೀತಿ ಇಟ್ಟು ಬೆಳೆಸಬೇಕು. ಸಂಸ್ಥೆಯ ಬೆಳವಣಿಗೆ ಹಂತದಲ್ಲಿ ಏಳು ಬೀಳು ಸಹಜ, ಸಮಸ್ಯೆ ಅಡಚಣೆಗಳನ್ನು ಎದುರಿಸಿ ಶಾಲಾಭಿವೃದ್ಧಿಯಲ್ಲಿ ಕೈಜೋಡಿಸುವುದು ಪ್ರತಿಯೊಬ್ಬರ       ಕರ್ತವ್ಯವಾಗಿದೆ.
      ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವ ಈ ಸಂದರ್ಭದಲ್ಲಿ ಗುಣಮಟ್ಟ ಮತ್ತು ಸೌಲಭ್ಯಗಳ ಕಡೆಗೆ ಸರ್ಕಾರ ಗಮನ ಹರಿಸಿದರೆ ಸುವರ್ಣ ಮಹೋತ್ಸವದತ್ತ ಸಾಗುತ್ತಿರುವ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಆ ಮೂಲಕ ಶಿಕ್ಷಣ ಸಂಸ್ಥೆಗಳ ಮಧ್ಯೆ ಸ್ಪರ್ಧಾತ್ಮಕ ಮನೋಭಾವ  ಬೆಳೆದಿರುವ ಇಂದು ಉತ್ತಮ ಶಿಕ್ಷಣವನ್ನು ನೀಡಲು ಸಾಧ್ಯ, ಜೊತೆಗೆ ಮಕ್ಕಳ ಮೇಲೆ ಶಿಕ್ಷಣದ ಹೊರೆಯನ್ನು ಕಡಿಮೆಗೊಳಿಸಿ ಅವರ ಬಾಲ್ಯದಸವಿಯನ್ನು ಅನುಭವಿಸಲು ಪ್ರತಿಭೆಯನ್ನು ಬೆಳೆಸಲು ಪ್ರಾಥಮಿಕ ಶಿಕ್ಷಣ ಸಂಸ್ಥೆಯ ಕಾರ್ಯ  ಪ್ರಮುಖವಾದುದು.