Tuesday, 9 November 2010

ಸಾಂಸ್ಕೃತಿಕ ಕಾರ್ಯಕ್ರಮಗಳ ಔಚಿತ್ಯತೆ

ನಮ್ಮ ನೆಲದ ಸಾಂಸ್ಕೃತಿಕ ಸತ್ವವನ್ನು ಅನಾವರಣಗೊಳಿಸುವ ಕಲಾ ಪ್ರದರ್ಶನವನ್ನು ಸಾಂಸ್ಕೃತಿಕ ಕಾರ್ಯಕ್ರಮ ಎನ್ನಬಹುದು. ಇಂತಹ ಕಲಾ ಸಾಧ್ಯತೆಗಳನ್ನು ಆಸ್ವಾದಿಸುವ ಮೂಲಕ ಸಹೃದಯ ಪ್ರೇಕ್ಷಕರು ಮತ್ತಷ್ಟು ಸುಸಂಸ್ಕೃತರಾಗಿ ಬೆಳೆಯಬಹುದು. ಸಾಂಸ್ಕೃತಿಕ ಕಾರ್ಯಕ್ರಮ ಎಂದಾಕ್ಷಣ ಇಷ್ಟಪಡದವರು ಇಲ್ಲ. ದಾರಿಹೋಕರೂ ಕೂಡಾ ಆಸುಪಾಸಿನ ಶಾಲಾ ಕಾಲೇಜು, ಯುವಕ ಸಂಘ, ದೇವಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕ್ಷಣ ಮಾತ್ರದಲ್ಲಿ ದೃಷ್ಟಿ ಹಾಯಿಸುತ್ತಾರೆ. ಇನ್ನೂ ಕೆಲವರು ತನ್ನೆಲ್ಲ ಅತ್ಯಗತ್ಯ ಕೆಲಸಗಳನ್ನು ಬದಿಗೊತ್ತಿ ಕಾರ್ಯಕ್ರಮ ವೀಕ್ಷಿಸುವವರಿದ್ದಾರೆ.
       ಸಾಂಸ್ಕೃತಿಕ ಕಾರ್ಯಕ್ರಮಗಳು ಆಧುನಿಕ ಯುಗದಲ್ಲಿ ಮಕ್ಕಳು, ಯುವಕರು, ಹಿರಿಯರನ್ನು ಮನರಂಜಿಸುವ ಮಾಧ್ಯಮವಾಗಿವೆ. ಅಲ್ಲದೆ ಹಲವಾರು ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಸಾಧ್ಯವಾಗಿದೆ.
        ಇಂತಹ ಕಾರ್ಯಕ್ರಮಗಳು ಮೌಲ್ಯಯುತವಾಗಿ, ಮನೋರಂಜನೆ, ಸಮಯದ ಮಿತಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ವಸ್ತು ದೃಷ್ಟಿಯಲ್ಲಿ ಸಂದೇಶದ ಸ್ಪಷ್ಟತೆಯಿದ್ದು ಸಕುಟುಂಬಿಕವಾಗಿ ನೋಡುವಂತಿದ್ದರೆ ಒಳ್ಳೆಯದು.
        ಇಂತಹ ಕಾರ್ಯಕ್ರಮಗಳಲ್ಲಿ ನಿರೂಪಕರಿಗೆ ತನ್ನ ಮಾತಿನ ಶೈಲಿಯ ಛಾಪು ಬೀರಲು ಮತ್ತು ಪ್ರತಿಭೆಯ ಅನಾವರಣಕ್ಕೆ ಬೆಳವಣಿಗೆಗೆ ವೇದಿಕೆಯೂ ಹೌದು. ಕಾರ್ಯಕ್ರಮಗಳಲ್ಲಿ ನಿರೂಪಕರು ಸಾಕಷ್ಟು ಪೂರ್ವ ತಯಾರಿಯೊಂದಿಗೆ ಸ್ಪಷ್ಟವಾಗಿ ಮೂಡಿಬರಲಿರುವ ತಂಡ, ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯಪಡಿಸಿದರೆ ಸಾಕು. ನಿರೂಪಕರು ವೇದಿಕೆಯ ಮೇಲೆ ಕೇವಲ ತನ್ನ ವಾಕ್ಚತುರ್ಯ ತೋರಿಸಿದರೆ ಸಾಲದು, ಪರದೆಯ ಹಿಂದೆ ಇಡೀ ಕಾರ್ಯಕ್ರಮದ ಸ್ಪಷ್ಟ ಚಿತ್ರಣ ಆತನ ಮನದಲ್ಲಿ ಇರಬೇಕು. ಜೊತೆಗೆ ಕಾರ್ಯಕ್ರಮದ ಪಟ್ಟಿಯು ಆತನ ಜೊತೆಯಲ್ಲಿರಬೇಕು. ಯಾವುದನ್ನು ಮೊದಲು, ನಂತರ ಎಂಬುದನ್ನು (priority) ಗುಣ ಮೌಲ್ಯದ ದೃಷ್ಟಿಯಿಂದ ಮತ್ತು ವೀಕ್ಷಕರು ಆಸ್ವಾದಿಸುವ, ಸ್ವೀಕರಿಸುವ ವಿವೇಚನಾ ಪರಿಧಿಯಲ್ಲಿ ಸಂಯೋಜಿಸಬೇಕು. ಕೆಲವೊಂದು ಸಂಸ್ಕೃತಿ ಹೀನ, ಅಸಂಬದ್ಧ ಕಾರ್ಯಕ್ರಮಗಳನ್ನು ತೋರಿಸುವಾಗ ಪ್ರೇಕ್ಷಕರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.
        ಸಹಜವಾಗಿ ಕೆಲವೊಂದು ಕಾರ್ಯಕ್ರಮಗಳಿಗೆ ಹೆಚ್ಚಿನ ಜನಾಕರ್ಷಣೆ ಇರುತ್ತದೆ. ಇಂತಹ ಕಾರ್ಯಕ್ರಮಗಳನ್ನು ಮೊದಲಿಗೆ ಪ್ರದರ್ಶಿಸಿದರೆ ಉಳಿದ ಕಾರ್ಯಕ್ರಮಗಳಿಗೆ ಪ್ರೇಕ್ಷಕರಿಲ್ಲ ಎಂದಾಗುತ್ತದೆ. ಹೀಗಾಗಬಾರದು. ಬಹಳ ಮುಖ್ಯವಾದ ವಿಚಾರವೆಂದರೆ ಕಾರ್ಯಕ್ರಮ ಪ್ರಸ್ತುತಪಡಿಸುವ ವೇದಿಕೆ ಮತ್ತು ಪರಿಸರ. ನಿರ್ದಿಷ್ಟ ಕಾರ್ಯಕ್ರಮಗಳನ್ನು ಅನುಶಾಸನದ ಚೌಕಟ್ಟಿನೊಳಗೆ ನಡೆಸಿದರೆ ಒಳ್ಳೆಯದು. ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ಮಾತಿನ ಮಂಟಪ, ಮಿಮಿಕ್ರಿ, ರಂಗನಾಟಕಗಳು ಸೂಕ್ತವಾಗಿ ಸಾಹಿತ್ಯಾಸಕ್ತರಿಗೆ ಹಿಡಿಸಬಹುದು. ಅದೇ ರೀತಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಜಾತೆಗಳ ವೇದಿಕೆಯಲ್ಲಿ ಯಕ್ಷಗಾನ, ಸಾಮಾಜಿಕ ನಾಟಕ, ಭಕ್ತಿರಸಮಂಜರಿ ಕಾರ್ಯಕ್ರಮಗಳು ಸಾಂದರ್ಭಿಕವಾದುದು. ಶಾಲಾ ಕಾಲೇಜಿನ ವಾರ್ಷಿಕೋತ್ಸವಗಳು ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮಗಳು ಮನೋರಂಜನೆ ಮತ್ತು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಇತ್ತೀಚೆಗೆ ವಿವಾಹ ಸಮಾರಂಭಗಳಲ್ಲಿ ರಸಮಂಜರಿ, ಧಾರ್ಮಿಕ ಭಾಷಣಗಳು ನಡೆಯುತ್ತಿವೆ. ಒಟ್ಟು ವೇದಿಕೆ ಪರಿಸರಕ್ಕೆ ಹೊಂದಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಮನೋರಂಜನೆಯ ಮತ್ತು ಮೌಲ್ವಿಕ ದೃಷ್ಟಿಯಲ್ಲಿ ಸರಿಯಾದುದು.
        ಇತ್ತೀಚೆಗೆ ಮಂಗಳೂರಿನ ಪ್ರಖ್ಯಾತ ವಿದ್ಯಾಕೇಂದ್ರವೊಂದರಲ್ಲಿ ನಡೆದ ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತನಾಮರೊಬ್ಬರಿಂದ ಮಿಮಿಕ್ರಿ ಇಟ್ಟುಕೊಂಡಿದ್ದರು. ಕಾರ್ಯಕ್ರಮ ಸಂಯೋಜಕರ ಅಲ್ಪಜಾನ ಮತ್ತು ಬೇಜವಾಬ್ದಾರಿತನದಿಂದ, ರಾಜ್ಯಾದಂತ ಹಲವಾರು ಕಾರ್ಯಕ್ರಮ ನಡೆಸಿಕೊಟ್ಟ ಅವರು ದಮ್ಮಾಯ ಅವಕಾಶ ಮಾಡಿಕೊಡಿ ಎಂದು ವಿದ್ಯಾರ್ಥಿಗಳಲ್ಲಿ ಬೇಡುವ ಸ್ಥಿತಿ ಒದಗಿಬಂತು. ವಿದ್ಯಾರ್ಥಿಗಳ ಅಸಹಕಾರ, ಅವಮಾನಗಳು, ವಿದ್ಯಾಲಯದ ಪ್ರಮುಖರ ಸಮ್ಮುಖದಲ್ಲಿಯೇ ನಡೆಯಿತು. ಕಾರಣ ಕಾರ್ಯಕ್ರಮದ ಮೊದಲು ಜಗಮಗಿಸುವ ಬೆಳಕು ಮತ್ತು ಕಿವಿಗಡಚಿಕ್ಕುವ ಸೌಂಡ್‌ಬಾಕ್ಸ್‌ಗಳ ಶಬ್ದದೊಂದಿಗೆ ಹಾಡು, ಡ್ಯಾನ್ಸ್‌ಗಳ ಮಧ್ಯೆ ಮಿಮಿಕ್ರಿ, ಜೋಕ್ಸ್‌ಗಳು ವಿದ್ಯಾರ್ಥಿಗಳ ತಾಳ್ಮೆ ಕಟ್ಟೆಯೊಡೆಯಿತು. ಪ್ರಾರಂಭದಿಂದ ಕೊನೆತನಕ ಯಾವಾಗ ಮುಗಿಸುತ್ತಾರೋ ಎಂಬ ನಿರ್ಲಕ್ಷ್ಯದ ಭಾವನೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬರುತ್ತಿತ್ತು. ಮೊದಲೇ ನಗರದ ಕಾಲೇಜಿನ ಯುವಕ ಯುವತಿಯರಿಗೆ ಬಣ್ಣಬಣ್ಣದ ರಿಯಾಲಿಟಿ ಶೋ ಕುಣಿಯುವುದರಲ್ಲಿ ಹೆಚ್ಚು ಆಸಕ್ತಿ. ಮಿಮಿಕ್ರಿ, ಹರಿಕಥೆ ಎಂದರೆ ಅಷ್ಟಕಷ್ಟೇ. ಇಂತಹ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕರು ಇನ್ನಾವುದೋ ಸಾಹಿತ್ಯದ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಬಹುದಿತ್ತು. ಆಹ್ವಾನಿಸಿಯಾಗಿದೆಯಾದರೂ ಕಾರ್ಯಕ್ರಮದ ನಿರೂಪಕರು ಮೊದಲು ಮಿಮಿಕ್ರಿ ಕಾರ್ಯಕ್ರಮ ನಡೆಸಿ ಆನಂತರ ಡ್ಯಾನ್ಸ್, ಹಾಡು, ನಡೆಸುತ್ತಿದ್ದರೆ ಒಳ್ಳೆಯದಿತ್ತು, ಆದರೆ ಹಾಗೆ ಯೋಚಿಸದೆ ಒಬ್ಬ ಶ್ರೇಷ್ಟ, ಪ್ರತಿಭಾನ್ವಿತ ಕಲಾವಿದರಿಗೆ ಅವಮಾನವಾಗುವ ಸಂದರ್ಭ ಏರ್ಪಟ್ಟಿತು.
        ನಮ್ಮ ಮನಸ್ಸಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂದರೆ ಫಿಲ್ಮ್‌ಡ್ಯಾನ್ಸ್, ಟ್ರ್ಯಾಕ್ ಹಾಕಿ ಹಾಡುವುದೇ ಮನೋರಂಜನೆ ಕಲೆ ಎಂಬ ಮಾನಸಿಕ ಸೀಮಿತತೆ ಇದೆ. ಅದರಾಚೆ ಇನ್ನೂ ಇದೆ ಎಂಬ ಜಾನ ಇರಬೇಕು ಮತ್ತು ಎಲ್ಲಾ ಕಲೆಗಳಿಗೂ, ಕಲಾವಿದರಿಗೂ ಗೌರವ ನೀಡಬೇಕು. ಜೊತೆಗೆ ಕಾರ್ಯಕ್ರಮದ ವೇದಿಕೆ, ಪರಿಸರ, ಅನುಶಾಸನ, ಸರಿಯಾಗಿದೆಯೇ ಎಂದು ಮೊದಲೇ ತಿಳಿಯಬೇಕು. ನಿರ್ದಿಷ್ಟ ಸಮಯದ ಮಿತಿಯಲ್ಲಿ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವಾದರೆ ನಡೆಸಿದ ಕಾರ್ಯಕ್ರಮ ಸಾರ್ಥಕವಾದಿತು.

“ಗ್ರಾಮದೇಗುಲಗಳಾಗಿ ಗರೋಡಿಗಳು”

ತುಳುನಾಡು ಸಾಂಸ್ಕೃತಿಕ ಅನನ್ಯತೆಯ ನಾಡು. ದೈವ, ದೇವರುಗಳ ಸಮಾಗಮದ ಬೀಡು. ಇಲ್ಲಿನ ಪರಿಸರ, ಪ್ರಾಣಿ, ಪಕ್ಷಿ, ಗಿಡ, ಮರ, ಸ್ಥಳ, ವೀರ ಪುರುಷರ, ಆರಾಧನೆಯ ದೈವಿಕ ನೆಲೆಯಾಗಿದೆ. ಪ್ರತಿಯೊಂದು ನಂಬಿಕೆ ನಡವಳಿಕೆಗಳು ಜಾನಪದದ ಆಧಾರದಲ್ಲಿ ಹೆಣೆದಿರುವುದು ತುಳುನಾಡ ಸಂಸ್ಕೃತಿಯ ವೈಶಿಷ್ಟ್ಯ.
ವ್ಯಕ್ತಿಗಳು ತನ್ನ ಜೀವಿತ ಕಾಲದಲ್ಲಿ ಅಸಾಮಾನ್ಯ ರೀತಿಯಲ್ಲಿ ಬಾಳಿ ಬದುಕಿ ಬಲಿದಾನವಾದಾಗ ಅವರನ್ನು ದೈವತ್ವ ಮಟ್ಟಕ್ಕೆ ಏರಿಸಿ ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಕಂಡುಬರುತ್ತದೆ. ಅತಿಮಾನುಷ ಶಕ್ತಿಗಳನ್ನು ಪೂಜಿಸಲು ಅತ್ತ ದೇವಸ್ಥಾನವು ಅಲ್ಲದ ಇತ್ತ ಭೂತ ಸ್ಥಾನವೂ ಅಲ್ಲದ ಒಂದು ವಿಶಿಷ್ಟ ಪೂಜಾ ಕೇಂದ್ರವಾಗಿ ಗರೋಡಿ ಎಂಬ ದೇಗುಲವು ನಿರ್ಮಾಣವಾದುದು ಜನರ ಭಾವುಕ ಪ್ರಜ್ಞೆಗೆ ತಲೆಬಾಗಲೇ ಬೇಕಾದುದು. ಈ ಮೂಲಕ ಇಡೀ ಗ್ರಾಮ ವ್ಯವಸ್ಥೆಯಲ್ಲಿ ಆ ಗರೋಡಿಗೆ ಸಂಬಂಧಿಸಿದ ಸಮುದಾಯದ ಜನರನ್ನು ಒಂದುಗೂಡಿಸುವಲ್ಲಿ ದೈವ ಭಕ್ತಿಯು  ಕಾರಣವಾಗಿದೆ. ಅಲ್ಲದೆ ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಸಮುದಾಯಗಳ ಮಧ್ಯೆ ಸಾಮರಸ್ಯ ಮೂಡಿಸಲು ಮತ್ತು ಪಾಲ್ಗೊಳ್ಳುವಿಕೆಗೆ ಗರೋಡಿಗಳು ಒಂದು ಕಾರಣವಾಗಿದೆ.

ಗರೋಡಿ ಶಬ್ದೊತ್ಪತ್ತಿ:
        ಗರೋಡಿ ಎಂಬುದು ಶಸ್ತ್ರ ವಿದ್ಯೆ, ಜಟ್ಟಿ ಕಾಳಗ ಮೊದಲಾದುವನ್ನು ಅಭ್ಯಾಸ ಮಾಡುವ ವ್ಯಾಯಾಮ ಶಾಲೆ ಎಂಬುದಾಗಿದ್ದು ಕಾಲಾನಂತರದಲ್ಲಿ ವೀರ ಪುರುಷರ ಆರಾಧನಾ ಕೇಂದ್ರವಾಗಿ ಮಾರ್ಪಾಡಾಗಿದೆ. ಯುದ್ಧ ಶಿಕ್ಷಣ ಕೇಂದ್ರದಲ್ಲಿ ಕಳರಿ, ಮಲ್ಲಕಂಭ ಮುಂತಾದ ಕಠಿಣ ತರಬೇತಿ ಪಡೆದು ಬಲಿದಾನ ಹೊಂದಿದ ಮಹಾ ಪುರುಷರನ್ನು ಹಿಂದೆ ಗರುಡರೆಂದೂ ಕರೆಯಲಾಗುತ್ತಿತ್ತು. ಈ ರೀತಿ ಗರೋಡಿಗಳಲ್ಲಿ ಯುದ್ಧ ವಿದ್ಯೆಯ ತರಬೇತಿ ಪಡೆದು ತ್ಯಾಗ, ಶೌರ್ಯ ಮೆರೆದು, ಬಲಿದಾನ ಹೊಂದಿ ಬ್ರಹ್ಮ ಬೈದರ್‌ರಾದ ವೀರರೇ ಕೋಟಿ ಚೆನ್ನಯ್ಯರು. ಇವರ ಬಲಿದಾನಕ್ಕಿಂತ ಮೊದಲೇ ಗರೋಡಿಗಳು ಅಸ್ತಿತ್ವದಲ್ಲಿದ್ದು ಅದರಲ್ಲಿಯೆ ಪಳಗಿದ ಅಸಾಮಾನ್ಯ ವ್ಯಕ್ತಿಗಳಾಗಿದ್ದರು.

ಕೋಟಿ ಚೆನ್ನಯ್ಯರು ಬೈದೆರ್ಲುಗಳಾದ ಬಗೆ:
        ದೇವರಿಗಿಂತ ಕೆಳಗೆ ಭೂತಗಳಿಗಿಂತ ಮೇಲಿನ ಸ್ಥಾನವನ್ನು ಹೊಂದಿರುವ, ಬೈದೆರ್ಲುಗಳು ಇಂದು ತುಳುನಾಡಿನ ಎಲ್ಲಾ ಜಾತಿ, ಮತ, ವರ್ಗಗಳ ಜನರ ನಡುವೆ ಗರೋಡಿಗಳಲ್ಲಿ ಪೂಜಿಸಲ್ಪಡುತ್ತಿದ್ದಾರೆ.
        ನಾಗಬ್ರಹ್ಮರನ್ನು ಕುಲದೇವರಾಗಿ ನಂಬಿ, ಬದುಕಿನಲ್ಲಿ ಸತ್ಯ, ನ್ಯಾಯ, ಧರ್ಮವನ್ನು ಪರಿಪಾಲಿಸುತ್ತ ಜಾತಿಪದ್ಧತಿ, ವರ್ಗ ಭೇದದ ತಾರತಮ್ಯದಿಂದ ಬಡಜನ ತತ್ತರಿಸಿದ್ದ ಕಾಲದಲ್ಲಿ ಸಮಾಜದ ಮಧ್ಯೆ ಎದ್ದು ನಿಂತು ಶೌರ್ಯ ಮೆರೆದು ಅಸಹಾಯಕ ವರ್ಗದವರಿಗೆ ನ್ಯಾಯ ದೊರಕಿಸಿ, ಅನ್ಯಾಯವನ್ನು ಹಿಮ್ಮೆಟ್ಟಿಸಿ ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಜಾನಪದ ರಂಗದಲ್ಲಿ ದೈವತ್ವ ಮಟ್ಟಕ್ಕೇರಿ ಬೈದೆರ್ಲುಗಳಾದರು.
        ಕೋಟಿ ಚೆನ್ನಯರು ಅವಸಾನವಾದ ನಂತರ ಉತ್ತರ ಕ್ರಿಯಾದಿಗಳನ್ನು ಬಲ್ಲಾಲರು ನೆರವೇರಿಸಿ ದುಃಖತಪ್ತರಾಗಿ ಮಲಗಿದಾಗ ಅವಳಿ ವೀರರು ಕನಸಿನಲ್ಲಿ ಬಂದು ಹದಿನಾರು ಕೋಲು ಉದ್ದದ ಗರೋಡಿ ಕಟ್ಟಿಸಬೇಕು, ಎರಡು ತಂಬಿಗೆ ಹಾಲು ಕೊಡಬೇಕು ಎಂದು ಅಭಯದ ನುಡಿಕೊಡುತ್ತಾರೆ. ಆ ಪ್ರಕಾರವಾಗಿ ಎಣ್ಮೂರಿನಲ್ಲಿ ಬಲ್ಲಾಳರು ಆದಿ ಬೈದೆರ್ ಗರೋಡಿ ಸ್ಥಾಪನೆ ಮಾಡಿದರು ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ. ಅಲ್ಲಿಂದ ಗರೋಡಿಗಳ ಪ್ರಸರಣವಾಯಿತು.

ಬೈದೆರ್ಲುಗಳ ಪ್ರಸರಣ:
        ಬೈದೆರ್ಲುಗಳು ಅರುವತ್ತಾರು ಗರೋಡಿ ಮೂವತ್ತ ಮೂರು ತಾವು ಕಟ್ಟಿಸಿಕೊಂಡೆವು ಎಂಬ ಐತಿಹ್ಯವಿದ್ದರೂ ತುಳುನಾಡಿನ ಗರೋಡಿಗಳ ಬಗ್ಗೆ ಅಧ್ಯಯನ ನಡೆಸಿದ ಬನ್ನಂಜೆ ಬಾಬು ಅಮಿನ್ ಮತು ಮೋಹನ್ ಕೋಟ್ಯಾನ್‌ರವರು ಒಟ್ಟು 214 ಗರೋಡಿಗಳನ್ನು ಗುರುತಿಸಿದ್ದಾರೆ.
        ಬೈದೆರ್ಲುಗಳ ಪ್ರಸರಣದ ಬಗ್ಗೆ ಎರಡು ರೀತಿಯ ಐತಿಹ್ಯಗಳನ್ನು ಹೊಂದಿದೆ. ಬೈದೆರ್ಲುಗಳು ತನ್ನ ದೈವಿಕ ಶಕ್ತಿಯ ಮುಖಾಂತರ ಪ್ರದೇಶದಿಂದ ಪ್ರದೇಶಕ್ಕೆ ಪಸರಿಸಿ ಜನರಿಗೆ ಕನಸಿನಲ್ಲಿ ಕಾಣಿಸಿಕೊಂಡು ಗರೋಡಿ ಕಟ್ಟಲು ಸೂಚಿಸಿದ ನಂಬಿಕೆಗಳಾದರೆ ಇನ್ನೂ ಕೆಲವು ಕಡೆ ಜನರೇ ಸ್ವತಃ ತಮ್ಮ ಇಷ್ಟದಂತೆ ನಿರ್ಮಿಸಿದ ಗರೋಡಿಗಳು, ಬೈದೆರ್ಲುಗಳು ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಾಗ ಹಲವಾರು ಅಡಚಣೆಗಳು ಎದುರಾದದ್ದು ಐತಿಹ್ಯಗಳಿಂದ ತಿಳಿದುಬರುತ್ತದೆ. ಸ್ಥಳೀಯ ಪ್ರಭಾವಿ ಭೂತಗಳು, ಬೈದೆರ್ಲುಗಳನ್ನು ನೆಲೆಯಾಗಲು ಬಿಡದೆ ಓಡಿಸಿದ ನಿದರ್ಶನಗಳು ಇವೆ. ತನ್ನ ಅಸ್ತಿತ್ವಕ್ಕೆ, ಪ್ರಸಿದ್ಧಿಗೆ ಧಕ್ಕೆಯಾಗಬಹುದೆಂದು ಬೈದೆರ್ಲುಗಳನ್ನು ನೆಲೆವೂರಲು ಅವಕಾಶ ನೀಡಲಿಲ್ಲ. ಬಂಗಾಡಿಯಲ್ಲಿ ಬಂಗಾಡಿ ಉಳ್ಳಾಕುಳು ಅಲ್ಲದೆ ಇನ್ನೂ ಹಲವು ಕಡೆ ಪ್ರಬಲ ದೈವಗಳಿರುವ ಸ್ಥಳಗಳಲ್ಲಿ ಬೈದೆರ್ಲುಗಳು ನೆಲೆಯಾಗಲಿಲ್ಲ. ಆ ಕಾರಣದಿಂದ ಆ ಪ್ರದೇಶಗಳಲ್ಲಿ ಗರೋಡಿಗಳು ನಿರ್ಮಾಣವಾಗಿಲ್ಲದಿರುವುದು ದೈವಗಳಲ್ಲೂ ಇರುವ ಅಸಮಾನತೆಯನ್ನು ಗುರುತಿಸಬಹುದು. ಇನ್ನೂ ಕೆಲವು ಕಡೆ ಬೇಯಿಸಿದ ಭತ್ತ ಮೊಳಕೆಯೊಡೆದ ಪ್ರಸಂಗದಿಂದ ಬೈದೆರ್ಲುಗಳ ಕಾರಣಿಕವೆಂದು ತಿಳಿದು ಗರೋಡಿಗಳ ಸ್ಥಾಪನೆಗೆ ಪ್ರೇರಣೆಯಾಗಿದ್ದುಂಟು.

ಬೆಳ್ತಂಗಡಿ ತಾಲ್ಲೂಕಿನ ಗರಡಿಗಳು:
        ಗರೋಡಿಗಳನ್ನು ಎರಡು ವಿಧವಾಗಿ ಮನೆ ಗರೋಡಿ ಮತ್ತು ಗ್ರಾಮ ಗರೋಡಿಗಳಾಗಿ ಗುರುತಿಸಬಹುದು. ತಾಲ್ಲೂಕಿನ ಎರಡು ಮನೆ ಗರೋಡಿಗಳೆಂದರೆ ಮೇಲಂತಬೆಟ್ಟು ಮತ್ತು ದೇಲಂಪಾಡಿ ಗರೋಡಿಗಳು. ಬೆಳ್ತಂಗಡಿ ತಾಲ್ಲೂಕಿನಲ್ಲಿ ಒಟ್ಟು ಹದಿನಾರು ಗ್ರಾಮ ಗರೋಡಿಗಳಿವೆ. ಅವುಗಳೆಂದರೆ:
1. ಬಾವಂತಬೆಟ್ಟು ಮರಿಪಾದೆ ಗರೋಡಿ               2. ಬಂತಡ್ಕ ಗರೋಡಿ (ಶಿರ್ಲಾಲು ಗ್ರಾಮ)
3. ದೈಪಾಲ್‌ಬೆಟ್ಟು ಗರೋಡಿ (ಮೂಡುಕೋಡಿ)        4. ಕಾಶಿಪಟ್ನ ಗರೋಡಿ
5. ಕಾಲಿಪಾಡಿ ಗರೋಡಿ (ಮರೋಡಿ)          6. ಕೊಕ್ರಾಡಿ ಗರೋಡಿ
7. ಮಾರವಾಂಡಿ ಗರೋಡಿ (ಮುದ್ದಾಡಿ)               8. ನಾರಾವಿ ಗರೋಡಿ
9. ನಾವುಂಡ ಗರೋಡಿ (ಮಾಲಾಡಿ ಗ್ರಾಮ)          10. ನೇರಳೆಗುಡ್ಡೆ ಗರೋಡಿ (ಪೆರಿಂಜೆ)
11. ಪೆರಾಜೆ ಗರೋಡಿ (ಪೆರಾಡಿ)                      12. ಅರ್ಚಾಡಿ ಗರೋಡಿ (ಪಂಜಿನ ಡಯಿ)
13. ಸುಳ್ಕೇರಿಮೊಗ್ರು ಗರೋಡಿ                        14. ಸುಲ್ಕೇರಿ ಗರೋಡಿ      
15. ನಾವರ ಗರೋಡಿ                                 16. ಕುದ್ಯಾಡಿ ಗರೋಡಿ

ಪೂಜಾ ವಿಧಾನ:
        ಗರೋಡಿಗಳಲ್ಲಿ ನಾಗಬ್ರಹ್ಮರ ಆರಾಧನೆಯೊಂದಿಗೆ ಬೈದೆರ್ಲುಗಳ ಉತ್ಸವವು ಜನಮನದಲ್ಲಿ ಭಕ್ತಿ, ಶ್ರದ್ಧೆಗಳನ್ನು ಮೂಡಿಸಿದೆ. ಗರೋಡಿಗಳಲ್ಲಿರುವ ಆಚರಣೆಗಳು ಇತರ ದೇವಸ್ಥಾನಗಳಲ್ಲಿರುವಂತೆ ಪೂಜಾ ಪದ್ಧತಿಯನ್ನು ಒಳಗೊಂಡಿದೆ. ಬೈದೆರ್ಲುಗಳು ನಾಗಬ್ರಹ್ಮರೊಂದಿಗೆ ಸ್ಥಾನ ಪಡೆದ ಕಾರಣ ಗರೋಡಿಗಳಲ್ಲಿ ಅನ್ನ ನೈವೇದ್ಯಗಳು ಪೂರ್ತಿ ಶಾಖಾಹಾರ ಪದ್ಧತಿಯಾಗಿದೆ. ಸಂಕ್ರಮಣ, ಚೌತಿ ಪೂಜೆಗಳಂದು ಬೈದೆರ್ಲುಗಳಿಗೆ ಪರ್ವ ಸೇವೆ ನಡೆಯುತ್ತದೆ. ವಾರ್ಷಿಕಾಚರಣೆ ಸಂದರ್ಭದಲ್ಲಿ ಸುಗ್ಗಿ ತಿಂಗಳಲ್ಲಿ ಬೈದೆರ್ಲುಗಳಿಗೆ ಮತ್ತು ಅಲ್ಲಿರುವ ದೈವಗಳಿಗೆ ಕೋಲ ನಡೆಯುತ್ತದೆ. ಗರೋಡಿಗಳಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ಕಾಣಬಹುದು. ತಾಲ್ಲೂಕಿನ ಗರೋಡಿಗಳಲ್ಲಿ ಎರಡು ಗರೋಡಿಗಳು ಪುರಾತನವಾಗಿದ್ದು ಉಳಿದವು ಇತ್ತೀಚಿನವುಗಳು. ಗರೋಡಿಗಳಲ್ಲಿರುವ ಇತರ ದೈವಗಳು ಕೊಡಮಣಿತ್ತಾಯ, ದೈವ, ಮಾಯಾಂದಾಗ (ಮಾಣಿ ಬಾಲೆ), ಕಾಂಜ ಕುಜುಂಬ, ಜೋಗಿ ಪುರುಷ, ಕಲ್ಕುಡ ಕಲ್ಲುರ್ಟಿ, ಮಾರಂಡಿ, ಮೈಸಂದಾಯ, ಪಂಜುರ್ಲಿ, ಮಲಕಾಯ, ಪಿಲಿಚಾಮುಂಡಿ, ಕಾಳಮ್ಮ ಭೂತಗಳಿದ್ದು ಆಯಾ ಗ್ರಾಮದ ವೈವಿಧ್ಯತೆಗೆ ಅನುಸಾರವಾಗಿ ನೆಲೆಯಾಗಿವೆ. ಆ ಗ್ರಾಮದ ಪ್ರಭಾವಿ ದೈವಗಳು ಮಾತ್ರ ಅಲ್ಲಿ ಕಂಡುಬರುತ್ತವೆ.

ನಂಬಿಕೆ:
        ಗರೋಡಿಗಳ ವಾರ್ಷಿಕ ಆಚರಣೆ, ಜಾತ್ರೋತ್ಸವದ ಸಂದರ್ಭದಲ್ಲಿ ಜನ ಹರಕೆಯ ರೂಪದಲ್ಲಿ ಕುರುಂಟು ಮುಡಿ, ತೆಂಗಿನಕಾಯಿ ಹರಕೆ ರೂಪದಲ್ಲಿ ಸಲ್ಲಿಸುವುದು, ಬೆಳೆ ತರಕಾರಿ, ಕೃಷಿಗೆ ತೊಂದರೆಗಳಾದಾಗ ಬೈದೆರ್ಲುಗಳಿಗೆ ಹರಕೆ ಹೇಳುವ ಮುಖಾಂತರ ಬೈದೆರ್ಲುಗಳಿಗೆ ಮೊರೆ ಹೋಗುವುದು ಜನರಲ್ಲಿರುವ ಭಾವುಕ ಭಕ್ತಿಯನ್ನು ತೋರಿಸುತ್ತದೆ. ಬೇಯಿಸಿದ ಭತ್ತ ಮೊಳಕೆಯೊಡೆದರೆ ಬೈದೆರ್ಲುಗಳ ಉಪದ್ರ ಎಂಬ ನಂಬಿಕೆಯಿಂದ ಹರಕೆ ಹೇಳುವ ವಾಡಿಕೆಯಿದೆ.
        ಈ ರೀತಿಯಾಗಿ ಜನಮನದಲ್ಲಿ ಗ್ರಾಮ ದೇಗುಲಗಳಾಗಿ, ವಿವಿಧ ಜಾತಿ, ಸಮುದಾಯಗಳ ಮಧ್ಯೆ ಕಾರಣಿಕ ಪುರುಷರ ಗರೋಡಿಗಳು ಸಾಮಾಜಿಕ ಸಾಮರಸ್ಯದೊಂದಿಗೆ ಭಕ್ತಿ ಶ್ರದ್ಧೆಯ ಕೇಂದ್ರವಾಗಿದೆ.

ಗುರಿಯಾಗಲಿ ವಾರ್ಡ್ ಅಭಿವೃದ್ಧಿ- ನನಸಾಗಲಿ ರಾಮರಾಜ್ಯ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸರ್ಕಾರ ವ್ಯವಸ್ಥೆ ಕೂಡಾ ಒಂದು. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇರುವ ಒಂದು ವೇದಿಕೆಯಾಗಿದೆ. ದೂರದ ದಿಲ್ಲಿಯಲ್ಲಿ ನಡೆಯುವ ಆಡಳಿತ ಶೀಘ್ರವಾಗಿ ಹಳ್ಳಿಗಳಿಗೆ ತಲುಪುವುದು ಅಸಾಧ್ಯವಾದುದು. ಇಂತಹ ಸಮಯದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳೇ ಸೂಕ್ತ. ಆದ್ದರಿಂದ ಸ್ಥಳೀಯರೆ ಅದರ ಅಧಿಕಾರ ನಡೆಸಬೇಕೆಂಬ ಉದ್ದೇಶ ಸ್ಥಳೀಯ ಸರ್ಕಾರದ್ದು.
        ಪ್ರಜಾಪ್ರಭುತ್ವದ ತತ್ವ ಹಾಗೂ ಕಾರ್ಯಚರಣೆ ಬಗ್ಗೆ ಜನರಿಗೆ ಅರಿವು ಮೂಡಿಸಿ ವ್ಯವಸ್ಥೆಯನ್ನು ಭದ್ರಪಡಿಸಲು ಸ್ಥಳೀಯ ಸರ್ಕಾರಗಳು ಕಾರಣವಾಗಿದೆ. ಆ ಮೂಲಕ ರಾಷ್ಟ್ರದ ವಿಷಯಗಳಲ್ಲಿ ಪ್ರಜೆಗಳು ಸಕ್ರೀಯವಾಗಿ ಭಾಗವಹಿಸುವಂತೆ ಮಾಡುವ ಗುರಿಯು ಹೌದು. ಸ್ಥಳೀಯ ಸರ್ಕಾರ ವ್ಯವಸ್ಥೆಯಲ್ಲಿ ಪಂಚಾಯತ್‌ರಾಜ್ ಇಂದು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಇಂದು ವರ್ಷಕ್ಕೆ 5,000 ಕೋಟಿ ಆಯ-ವ್ಯಯವನ್ನು ಪಂಚಾಯತ್‌ರಾಜ್ ಇಲಾಖೆ ನಡೆಸುತ್ತಿರುವುದು ಗ್ರಾಮದ ಅಭಿವೃದ್ಧಿಯ ದೃಷ್ಟಿಯಲ್ಲಿ ಚಿಂತನಾರ್ಹವಾಗಿದೆ.
        ರಾಮಾಯಣ, ಮಹಾಭಾರತ, ಪ್ರಾಚೀನ ಕಾಲದಲ್ಲೂ ಪಂಚಾಯತಿ ಪದ್ಧತಿಯ ಬಗ್ಗೆ ಉಲ್ಲೇಖಗಳು ಕಂಡುಬಂದಿವೆ. ಬ್ರಿಟಿಷರು ಕೂಡ ಪಂಚಾಯತ್ ವ್ಯವಸ್ಥೆಗಳನ್ನು ಗ್ರಾಮೀಣ ಮಟ್ಟದಲ್ಲಿ ಅಳವಡಿಸಿಕೊಂಡಿದ್ದರು. ನಂತರ ದೇಶ ಸ್ವಾತಂತ್ರ್ಯ ಪಡೆದಾಗ ಸ್ಥಳೀಯ ಸರ್ಕಾರದ ಅನುಷ್ಟಾನಕ್ಕೆ ಸಮಿತಿಗಳನ್ನು ರಚಿಸಲಾಯಿತು. ಸಮಿತಿಗಳು ಸಲ್ಲಿಸಿದ ಶಿಫಾರಸುಗಳು ಜಾರಿಗೊಂಡರೂ ಯಶಸ್ಸು ಕಾಣಲಿಲ್ಲ. ತದನಂತರ 1993ರಲ್ಲಿ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಯ ಮುಖಾಂತರ ಸ್ಥಳೀಯ ಸರ್ಕಾರ ವ್ಯವಸ್ಥೆಯಲ್ಲಿ ಬದಲಾವಣೆ ತಂದದ್ದು ಒಂದು ಹೊಸ ಮೈಲುಗಲ್ಲಾಗಿದೆ.
ಕರ್ನಾಟಕದಲ್ಲಿ 1830 ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದಾಗ ಪಂಚಾಯತ್ ಅಧಿನಿಯಮ ಜಾರಿಗೆ ತರುವ ಮೂಲಕ ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದಿತು. ನಂತರ 1993 ರಲ್ಲಿ ಇದರ ನ್ಯೂನತೆಗಳನ್ನು ಸರಿಪಡಿಸಿ ಮತ್ತಷ್ಟು ವ್ಯವಸ್ಥಿತವಾಗಿ ಅಳವಡಿಸಲಾಯಿತು. ಇದರ ಪ್ರಕಾರ ಪಕ್ಷ ರಹಿತ, ಪ್ರತ್ಯಕ್ಷ ಚುನಾವಣೆ, ಪ್ರತಿ ಐದು ಸಾವಿರ ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯತು, ರಾಜ್ಯ ಚುನಾವಣಾ ಆಯೋಗದಿಂದ ಚುನಾವಣೆ ನಡೆಸುವುದು, ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆಯ ಪ್ರಮಾಣದ ಆಧಾರದ ಮೇಲೆ ಮೀಸಲಾತಿ, ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲಾತಿ ನೀಡುವುದು, ಸಂಸತ್ ಸದಸ್ಯರು, ವಿಧಾನ ಸಭಾ ಸದಸ್ಯರು, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರು ಮತ ಚಲಾಯಿಸುವ ಅಧಿಕಾರ, ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸಿನ ಅಧಿಕಾರ ನೀಡುವುದು ಮತ್ತು ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತಿಗಳಾಗಿ ವಿಭಾಗಿಸಲಾಯಿತು.
        ಇದರಲ್ಲಿ ಗ್ರಾಮ ಪಂಚಾಯತಿಯು ಅತೀ ಕೆಳಗಿನ ಆಡಳಿತ ಘಟಕವಾಗಿದೆ. ಭಾರತವು ಹಳ್ಳಿಗಳ ದೇಶವಾಗಿದ್ದು ಸುಮಾರು 5,75,000 ಗ್ರಾಮಗಳನ್ನು ಒಳಗೊಂಡಿರುವ ದೇಶ. ಸುಮಾರು ಶೇಕಡಾ 70 ಭಾಗ ಗ್ರಾಮೀಣ ಪ್ರದೇಶದಿಂದ ಕೂಡಿದೆ. ಆದ್ದರಿಂದ ದೇಶದ ಅಭಿವೃದ್ಧಿ ಮತ್ತು ಮುನ್ನಡೆ ಪ್ರಜಾಪ್ರಭುತ್ವದ ಬೆಳವಣಿಗೆ ಈ ಭಾಗದ ಜನರಿಂದಲೇ ನಡೆಯ ಬೇಕಾಗಿದೆ. ಪ್ರತೀ 400 ಜನರಿಗೆ ಒಬ್ಬನಂತೆ ಚುನಾಯಿತ ಪ್ರತಿನಿಧಿಗಳು ಸೇರಿದ ಗ್ರಾಮ ಪಂಚಾಯಿತಿಗಳು ಐದು ವರ್ಷದ ಅಧಿಕಾರವನ್ನು ಹೊಂದಿದೆ.
        ಗ್ರಾಮದ ಏಳಿಗೆಗೆ ಯೋಜನೆಗಳನ್ನು ರೂಪಿಸುವುದು, ವ್ಯವಸಾಯಕ್ಕೆ ಪ್ರೋತ್ಸಾಹ ನೀಡುವುದು, ಜನರಿಗೆ ಸ್ವ-ಉದ್ಯೋಗಕ್ಕೆ ಪ್ರೋತ್ಸಾಹ ನೀಡುವುದು, ಆರೋಗ್ಯ, ಗ್ರಾಮೀಣ ವಸತಿ ಸೌಕರ್ಯ ಒದಗಿಸುವುದು, ಗ್ರಾಮದ ನೈರ್ಮಲ್ಯ, ಶೌಚಾಲಯ, ಕುಡಿಯುವ ನೀರು, ರಸ್ತೆ, ಕಟ್ಟಡ, ಸೇತುವೆಗಳ ನಿರ್ಮಾಣ, ವಿದ್ಯುತ್, ಶಿಕ್ಷಣ, ಬಡತನ ನಿರ್ಮೂಲನಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಅನುಷ್ಟಾನ ಮಾಡುವುದು, ರುದ್ರಭೂಮಿಯ ಸಂರಕ್ಷಣೆ, ಗ್ರಂಥಾಲಯ, ಸಾರ್ವಜನಿಕ ಉದ್ಯಾನ ವನಗಳ ಸಂರಕ್ಷಣೆ, ಅಂಗಡಿ ಮಾರುಕಟ್ಟೆಗಳ ನಿಯಂತ್ರಣ ಇವೆಲ್ಲವೂ ಗ್ರಾಮ ಪಂಚಾಯತಿಯ ಮುಖ್ಯ ಕರ್ತವ್ಯವಾಗಿದೆ.
        ಜನರ ಭಾಗವಹಿಸುವಿಕೆಯು ಪಂಚಾಯತ್ ಆಡಳಿತದಲ್ಲಿ ಮತ್ತು ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖವಾಗಿದೆ. ಗ್ರಾಮ ಸಭೆಯ ಮೂಲಕವೇ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂಬ ನಿಯಮವು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿದೆ. ಗ್ರಾಮ ಪಂಚಾಯತ್‌ನ ಆಡಳಿತದಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕ ತಪಾಸಣೆ ಸ್ಪಷ್ಟವಾಗಿರಬೇಕು. ಕರ್ನಾಟಕ ಆರ್ಥಿಕ ಸಂಹಿತೆಯ ಪ್ರಕಾರ ಕಛೇರಿ ಮುಖ್ಯಸ್ಥ ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ, ಅವ್ಯವಹಾರ ನಡೆಸಿದರೆ ಶಿಕ್ಷೆಗೆ ಅರ್ಹನಾಗಿರುತ್ತಾನೆ. ಪಂಚಾಯತ್ ಅಧ್ಯಕ್ಷನಾಗುವನು ಸಾರ್ವಜನಿಕ ಹಣದಲ್ಲಿ ತನಗೆ ನೇರವಾಗಿ ಲಾಭವಾಗುವ ಕೆಲಸಗಳಿಗೆ ಖರ್ಚು ಮಾಡುವಂತಿಲ್ಲ ಎಂಬ ನಿಯಮವಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಗ್ರಾಮ ಪಂಚಾಯತಿಯಲ್ಲಿ ಸದಸ್ಯರು ಸಭೆ ಸೇರಿ ಗ್ರಾಮದ ಅಭಿವೃದ್ಧಿಗೆ ಯೋಜನೆ ರೂಪಿಸುವುದು ಕರ್ತವ್ಯವಾಗಿದೆ. ಗ್ರಾಮ ಸಭೆಯು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ವೇದಿಕೆಯಾಗಿದೆ. ಗ್ರಾಮ ಸಭೆ ನಡೆಸಲು ಕೋರಂ ಶೇ. 10 ಅಥವಾ ನೂರು ಮತದಾರರಿರಬೇಕು. ಗ್ರಾಮ ಸಭೆಯಂತೆ ವಾರ್ಡ್ ಸಭೆಯು ಮುಖ್ಯವಾದುದು ವಾರ್ಡ್ ಸಭೆಗೆ ಕೋರಂ ಶೇ. 10 ಅಥವಾ 20 ಜನ ಇದ್ದರೂ ನಡೆಸಬಹುದು.
        ಜನಸಂಖ್ಯೆಯ ಆಧಾರದ ಮೇಲೆ ಪಂಚಾಯತ್‌ನ ವ್ಯಾಪ್ತಿಯಾಗುತ್ತದೆ. ಅದರ ಅನುಗುಣವಾಗಿ ವಾರ್ಡ್‌ಗಳನ್ನು ರಚನೆಮಾಡಲಾಗುತ್ತದೆ. ವಾರ್ಡ್‌ಗಳಲ್ಲಿಯೂ ಜನಸಂಖ್ಯೆಗನುಗುಣವಾಗಿ ಚುನಾವಣೆಯಲ್ಲಿ ಮೀಸಲಾತಿಯನ್ನು ನಿಗದಿಪಡಿಸಲಾಗುತ್ತದೆ. ಈ ವಾರ್ಡ್‌ಗಳಿಂದಲೇ ಜಯಗಳಿಸಿದ ಅಭ್ಯರ್ಥಿಗಳೇ ಪಂಚಾಯತ್ ಸದಸ್ಯರು. ಒಬ್ಬ ಸದಸ್ಯನಿಗೆ ತನ್ನ ವಾರ್ಡ್‌ನ ಮೇಲೆ ಮಾತ್ರ ಹಿಡಿತ. ತಾನು ಆರಿಸಿ ಬಂದ ವಾರ್ಡ್‌ನ ಸರ್ವಾಂಗೀಣ ಅಭಿವೃದ್ಧಿಯೇ ಆತನ ಗುರಿಯಾಗಬೇಕು. ನನ್ನ ವಾರ್ಡ್‌ನ ಅಭಿವೃದ್ಧಿ ನನ್ನ ಗುರಿ, ವಾರ್ಡ್ ಅಭಿವೃದ್ಧಿಯೇ ಗ್ರಾಮದ ಅಭಿವೃದ್ಧಿ ಎಂಬ ಧ್ಯೇಯದೊಂದಿಗೆ ಗ್ರಾಮ ಪಂಚಾಯತ್ ಸದಸ್ಯರು ರಾಮರಾಜ್ಯದ ನಿರ್ಮಾಣಕ್ಕೆ ತನ್ನ ಪಾಲು ಇದೆ ಎಂಬ ಕರ್ತವ್ಯದೊಂದಿಗೆ ಕಾರ್ಯಪ್ರವೃತ್ತರಾಗಬೇಕು.
        ಪ್ರತೀ ಸದಸ್ಯರು ತನ್ನ ವಾರ್ಡ್‌ನ ಸಮಸ್ಯೆ, ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಹರಿಸಿ ಸದಾ ಜನರೊಂದಿಗೆ ಸಂಪರ್ಕದಿಂದಿರುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯ. ವಾರ್ಡ್ ಸಭೆಗಳನ್ನು ನಡೆಸುವ ಮೂಲಕ ತನ್ನ ವ್ಯಾಪ್ತಿಯ ಜನರ ಬೇಡಿಕೆ, ಆಶೋತ್ತರಗಳನ್ನು ಈಡೇರಿಸುವುದು ಸದಸ್ಯರ ಆದ್ಯ ಕರ್ತವ್ಯವಾಗಿದೆ. ಜನರು ಕೂಡ ವಾರ್ಡ್ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ಸವಲತ್ತುಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ತಿಳಿಯುವುದು ಕರ್ತವ್ಯವಾಗಿದೆ.
        ಗ್ರಾಮದ ಅಭಿವೃದ್ಧಿಯ ಮೂಲ ವಾರ್ಡ್‌ಗಳ ಅಭಿವೃದ್ಧಿ. ಸದಸ್ಯರೆಲ್ಲರೂ ತನ್ನ ಅಭಿವೃದ್ಧಿ ಎಂದು ಭಾವಿಸಿ ಸರ್ಕಾರದ ಯೋಜನೆ, ಸವಲತ್ತುಗಳನ್ನು ಜನರಿಗೆ ಮುಟ್ಟಿಸಿದರೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಾದರೆ ನಮ್ಮ ದೇಶ ರಾಮರಾಜ್ಯವಾಗಬಲ್ಲುದು. ಆ ಮೂಲಕ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ಹೆಚ್ಚೇನೂ ದಿನಗಳು ಬೇಕಿಲ್ಲ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡದೆ ತನ್ನ ಗ್ರಾಮವನ್ನು ದೇಶದಲ್ಲೆ ನಂಬರ್ ಒನ್ ಗ್ರಾಮ ಎಂದು ಗುರುತಿಸಿಕೊಳ್ಳುವ ಅವಕಾಶ ಪ್ರತೀ ಗ್ರಾಮಕ್ಕೂ ಒದಗಿ ಬರಲಿ.