ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸರ್ಕಾರ ವ್ಯವಸ್ಥೆ ಕೂಡಾ ಒಂದು. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇರುವ ಒಂದು ವೇದಿಕೆಯಾಗಿದೆ. ದೂರದ ದಿಲ್ಲಿಯಲ್ಲಿ ನಡೆಯುವ ಆಡಳಿತ ಶೀಘ್ರವಾಗಿ ಹಳ್ಳಿಗಳಿಗೆ ತಲುಪುವುದು ಅಸಾಧ್ಯವಾದುದು. ಇಂತಹ ಸಮಯದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳೇ ಸೂಕ್ತ. ಆದ್ದರಿಂದ ಸ್ಥಳೀಯರೆ ಅದರ ಅಧಿಕಾರ ನಡೆಸಬೇಕೆಂಬ ಉದ್ದೇಶ ಸ್ಥಳೀಯ ಸರ್ಕಾರದ್ದು.
ಪ್ರಜಾಪ್ರಭುತ್ವದ ತತ್ವ ಹಾಗೂ ಕಾರ್ಯಚರಣೆ ಬಗ್ಗೆ ಜನರಿಗೆ ಅರಿವು ಮೂಡಿಸಿ ವ್ಯವಸ್ಥೆಯನ್ನು ಭದ್ರಪಡಿಸಲು ಸ್ಥಳೀಯ ಸರ್ಕಾರಗಳು ಕಾರಣವಾಗಿದೆ. ಆ ಮೂಲಕ ರಾಷ್ಟ್ರದ ವಿಷಯಗಳಲ್ಲಿ ಪ್ರಜೆಗಳು ಸಕ್ರೀಯವಾಗಿ ಭಾಗವಹಿಸುವಂತೆ ಮಾಡುವ ಗುರಿಯು ಹೌದು. ಸ್ಥಳೀಯ ಸರ್ಕಾರ ವ್ಯವಸ್ಥೆಯಲ್ಲಿ ಪಂಚಾಯತ್‌ರಾಜ್ ಇಂದು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಇಂದು ವರ್ಷಕ್ಕೆ 5,000 ಕೋಟಿ ಆಯ-ವ್ಯಯವನ್ನು ಪಂಚಾಯತ್‌ರಾಜ್ ಇಲಾಖೆ ನಡೆಸುತ್ತಿರುವುದು ಗ್ರಾಮದ ಅಭಿವೃದ್ಧಿಯ ದೃಷ್ಟಿಯಲ್ಲಿ ಚಿಂತನಾರ್ಹವಾಗಿದೆ. ರಾಮಾಯಣ, ಮಹಾಭಾರತ, ಪ್ರಾಚೀನ ಕಾಲದಲ್ಲೂ ಪಂಚಾಯತಿ ಪದ್ಧತಿಯ ಬಗ್ಗೆ ಉಲ್ಲೇಖಗಳು ಕಂಡುಬಂದಿವೆ. ಬ್ರಿಟಿಷರು ಕೂಡ ಪಂಚಾಯತ್ ವ್ಯವಸ್ಥೆಗಳನ್ನು ಗ್ರಾಮೀಣ ಮಟ್ಟದಲ್ಲಿ ಅಳವಡಿಸಿಕೊಂಡಿದ್ದರು. ನಂತರ ದೇಶ ಸ್ವಾತಂತ್ರ್ಯ ಪಡೆದಾಗ ಸ್ಥಳೀಯ ಸರ್ಕಾರದ ಅನುಷ್ಟಾನಕ್ಕೆ ಸಮಿತಿಗಳನ್ನು ರಚಿಸಲಾಯಿತು. ಸಮಿತಿಗಳು ಸಲ್ಲಿಸಿದ ಶಿಫಾರಸುಗಳು ಜಾರಿಗೊಂಡರೂ ಯಶಸ್ಸು ಕಾಣಲಿಲ್ಲ. ತದನಂತರ 1993ರಲ್ಲಿ ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಯ ಮುಖಾಂತರ ಸ್ಥಳೀಯ ಸರ್ಕಾರ ವ್ಯವಸ್ಥೆಯಲ್ಲಿ ಬದಲಾವಣೆ ತಂದದ್ದು ಒಂದು ಹೊಸ ಮೈಲುಗಲ್ಲಾಗಿದೆ.
ಕರ್ನಾಟಕದಲ್ಲಿ 1830 ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದಾಗ ಪಂಚಾಯತ್ ಅಧಿನಿಯಮ ಜಾರಿಗೆ ತರುವ ಮೂಲಕ ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದಿತು. ನಂತರ 1993 ರಲ್ಲಿ ಇದರ ನ್ಯೂನತೆಗಳನ್ನು ಸರಿಪಡಿಸಿ ಮತ್ತಷ್ಟು ವ್ಯವಸ್ಥಿತವಾಗಿ ಅಳವಡಿಸಲಾಯಿತು. ಇದರ ಪ್ರಕಾರ ಪಕ್ಷ ರಹಿತ, ಪ್ರತ್ಯಕ್ಷ ಚುನಾವಣೆ, ಪ್ರತಿ ಐದು ಸಾವಿರ ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯತು, ರಾಜ್ಯ ಚುನಾವಣಾ ಆಯೋಗದಿಂದ ಚುನಾವಣೆ ನಡೆಸುವುದು, ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆಯ ಪ್ರಮಾಣದ ಆಧಾರದ ಮೇಲೆ ಮೀಸಲಾತಿ, ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲಾತಿ ನೀಡುವುದು, ಸಂಸತ್ ಸದಸ್ಯರು, ವಿಧಾನ ಸಭಾ ಸದಸ್ಯರು, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯರು ಮತ ಚಲಾಯಿಸುವ ಅಧಿಕಾರ, ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸಿನ ಅಧಿಕಾರ ನೀಡುವುದು ಮತ್ತು ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತಿಗಳಾಗಿ ವಿಭಾಗಿಸಲಾಯಿತು.
ಇದರಲ್ಲಿ ಗ್ರಾಮ ಪಂಚಾಯತಿಯು ಅತೀ ಕೆಳಗಿನ ಆಡಳಿತ ಘಟಕವಾಗಿದೆ. ಭಾರತವು ಹಳ್ಳಿಗಳ ದೇಶವಾಗಿದ್ದು ಸುಮಾರು 5,75,000 ಗ್ರಾಮಗಳನ್ನು ಒಳಗೊಂಡಿರುವ ದೇಶ. ಸುಮಾರು ಶೇಕಡಾ 70 ಭಾಗ ಗ್ರಾಮೀಣ ಪ್ರದೇಶದಿಂದ ಕೂಡಿದೆ. ಆದ್ದರಿಂದ ದೇಶದ ಅಭಿವೃದ್ಧಿ ಮತ್ತು ಮುನ್ನಡೆ ಪ್ರಜಾಪ್ರಭುತ್ವದ ಬೆಳವಣಿಗೆ ಈ ಭಾಗದ ಜನರಿಂದಲೇ ನಡೆಯ ಬೇಕಾಗಿದೆ. ಪ್ರತೀ 400 ಜನರಿಗೆ ಒಬ್ಬನಂತೆ ಚುನಾಯಿತ ಪ್ರತಿನಿಧಿಗಳು ಸೇರಿದ ಗ್ರಾಮ ಪಂಚಾಯಿತಿಗಳು ಐದು ವರ್ಷದ ಅಧಿಕಾರವನ್ನು ಹೊಂದಿದೆ.
ಗ್ರಾಮದ ಏಳಿಗೆಗೆ ಯೋಜನೆಗಳನ್ನು ರೂಪಿಸುವುದು, ವ್ಯವಸಾಯಕ್ಕೆ ಪ್ರೋತ್ಸಾಹ ನೀಡುವುದು, ಜನರಿಗೆ ಸ್ವ-ಉದ್ಯೋಗಕ್ಕೆ ಪ್ರೋತ್ಸಾಹ ನೀಡುವುದು, ಆರೋಗ್ಯ, ಗ್ರಾಮೀಣ ವಸತಿ ಸೌಕರ್ಯ ಒದಗಿಸುವುದು, ಗ್ರಾಮದ ನೈರ್ಮಲ್ಯ, ಶೌಚಾಲಯ, ಕುಡಿಯುವ ನೀರು, ರಸ್ತೆ, ಕಟ್ಟಡ, ಸೇತುವೆಗಳ ನಿರ್ಮಾಣ, ವಿದ್ಯುತ್, ಶಿಕ್ಷಣ, ಬಡತನ ನಿರ್ಮೂಲನಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಅನುಷ್ಟಾನ ಮಾಡುವುದು, ರುದ್ರಭೂಮಿಯ ಸಂರಕ್ಷಣೆ, ಗ್ರಂಥಾಲಯ, ಸಾರ್ವಜನಿಕ ಉದ್ಯಾನ ವನಗಳ ಸಂರಕ್ಷಣೆ, ಅಂಗಡಿ ಮಾರುಕಟ್ಟೆಗಳ ನಿಯಂತ್ರಣ ಇವೆಲ್ಲವೂ ಗ್ರಾಮ ಪಂಚಾಯತಿಯ ಮುಖ್ಯ ಕರ್ತವ್ಯವಾಗಿದೆ.
ಜನರ ಭಾಗವಹಿಸುವಿಕೆಯು ಪಂಚಾಯತ್ ಆಡಳಿತದಲ್ಲಿ ಮತ್ತು ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖವಾಗಿದೆ. ಗ್ರಾಮ ಸಭೆಯ ಮೂಲಕವೇ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂಬ ನಿಯಮವು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿದೆ. ಗ್ರಾಮ ಪಂಚಾಯತ್‌ನ ಆಡಳಿತದಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕ ತಪಾಸಣೆ ಸ್ಪಷ್ಟವಾಗಿರಬೇಕು. ಕರ್ನಾಟಕ ಆರ್ಥಿಕ ಸಂಹಿತೆಯ ಪ್ರಕಾರ ಕಛೇರಿ ಮುಖ್ಯಸ್ಥ ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ, ಅವ್ಯವಹಾರ ನಡೆಸಿದರೆ ಶಿಕ್ಷೆಗೆ ಅರ್ಹನಾಗಿರುತ್ತಾನೆ. ಪಂಚಾಯತ್ ಅಧ್ಯಕ್ಷನಾಗುವನು ಸಾರ್ವಜನಿಕ ಹಣದಲ್ಲಿ ತನಗೆ ನೇರವಾಗಿ ಲಾಭವಾಗುವ ಕೆಲಸಗಳಿಗೆ ಖರ್ಚು ಮಾಡುವಂತಿಲ್ಲ ಎಂಬ ನಿಯಮವಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಗ್ರಾಮ ಪಂಚಾಯತಿಯಲ್ಲಿ ಸದಸ್ಯರು ಸಭೆ ಸೇರಿ ಗ್ರಾಮದ ಅಭಿವೃದ್ಧಿಗೆ ಯೋಜನೆ ರೂಪಿಸುವುದು ಕರ್ತವ್ಯವಾಗಿದೆ. ಗ್ರಾಮ ಸಭೆಯು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ವೇದಿಕೆಯಾಗಿದೆ. ಗ್ರಾಮ ಸಭೆ ನಡೆಸಲು ಕೋರಂ ಶೇ. 10 ಅಥವಾ ನೂರು ಮತದಾರರಿರಬೇಕು. ಗ್ರಾಮ ಸಭೆಯಂತೆ ವಾರ್ಡ್ ಸಭೆಯು ಮುಖ್ಯವಾದುದು ವಾರ್ಡ್ ಸಭೆಗೆ ಕೋರಂ ಶೇ. 10 ಅಥವಾ 20 ಜನ ಇದ್ದರೂ ನಡೆಸಬಹುದು.
ಜನಸಂಖ್ಯೆಯ ಆಧಾರದ ಮೇಲೆ ಪಂಚಾಯತ್‌ನ ವ್ಯಾಪ್ತಿಯಾಗುತ್ತದೆ. ಅದರ ಅನುಗುಣವಾಗಿ ವಾರ್ಡ್‌ಗಳನ್ನು ರಚನೆಮಾಡಲಾಗುತ್ತದೆ. ವಾರ್ಡ್‌ಗಳಲ್ಲಿಯೂ ಜನಸಂಖ್ಯೆಗನುಗುಣವಾಗಿ ಚುನಾವಣೆಯಲ್ಲಿ ಮೀಸಲಾತಿಯನ್ನು ನಿಗದಿಪಡಿಸಲಾಗುತ್ತದೆ. ಈ ವಾರ್ಡ್‌ಗಳಿಂದಲೇ ಜಯಗಳಿಸಿದ ಅಭ್ಯರ್ಥಿಗಳೇ ಪಂಚಾಯತ್ ಸದಸ್ಯರು. ಒಬ್ಬ ಸದಸ್ಯನಿಗೆ ತನ್ನ ವಾರ್ಡ್‌ನ ಮೇಲೆ ಮಾತ್ರ ಹಿಡಿತ. ತಾನು ಆರಿಸಿ ಬಂದ ವಾರ್ಡ್‌ನ ಸರ್ವಾಂಗೀಣ ಅಭಿವೃದ್ಧಿಯೇ ಆತನ ಗುರಿಯಾಗಬೇಕು. ‘ನನ್ನ ವಾರ್ಡ್‌ನ ಅಭಿವೃದ್ಧಿ ನನ್ನ ಗುರಿ, ವಾರ್ಡ್ ಅಭಿವೃದ್ಧಿಯೇ ಗ್ರಾಮದ ಅಭಿವೃದ್ಧಿ’ ಎಂಬ ಧ್ಯೇಯದೊಂದಿಗೆ ಗ್ರಾಮ ಪಂಚಾಯತ್ ಸದಸ್ಯರು ರಾಮರಾಜ್ಯದ ನಿರ್ಮಾಣಕ್ಕೆ ತನ್ನ ಪಾಲು ಇದೆ ಎಂಬ ಕರ್ತವ್ಯದೊಂದಿಗೆ ಕಾರ್ಯಪ್ರವೃತ್ತರಾಗಬೇಕು.
ಪ್ರತೀ ಸದಸ್ಯರು ತನ್ನ ವಾರ್ಡ್‌ನ ಸಮಸ್ಯೆ, ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಹರಿಸಿ ಸದಾ ಜನರೊಂದಿಗೆ ಸಂಪರ್ಕದಿಂದಿರುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯ. ವಾರ್ಡ್ ಸಭೆಗಳನ್ನು ನಡೆಸುವ ಮೂಲಕ ತನ್ನ ವ್ಯಾಪ್ತಿಯ ಜನರ ಬೇಡಿಕೆ, ಆಶೋತ್ತರಗಳನ್ನು ಈಡೇರಿಸುವುದು ಸದಸ್ಯರ ಆದ್ಯ ಕರ್ತವ್ಯವಾಗಿದೆ. ಜನರು ಕೂಡ ವಾರ್ಡ್ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ಸವಲತ್ತುಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ತಿಳಿಯುವುದು ಕರ್ತವ್ಯವಾಗಿದೆ.
ಗ್ರಾಮದ ಅಭಿವೃದ್ಧಿಯ ಮೂಲ ವಾರ್ಡ್‌ಗಳ ಅಭಿವೃದ್ಧಿ. ಸದಸ್ಯರೆಲ್ಲರೂ ತನ್ನ ಅಭಿವೃದ್ಧಿ ಎಂದು ಭಾವಿಸಿ ಸರ್ಕಾರದ ಯೋಜನೆ, ಸವಲತ್ತುಗಳನ್ನು ಜನರಿಗೆ ಮುಟ್ಟಿಸಿದರೆ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಾದರೆ ನಮ್ಮ ದೇಶ ರಾಮರಾಜ್ಯವಾಗಬಲ್ಲುದು. ಆ ಮೂಲಕ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ಹೆಚ್ಚೇನೂ ದಿನಗಳು ಬೇಕಿಲ್ಲ. ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡದೆ ತನ್ನ ಗ್ರಾಮವನ್ನು ದೇಶದಲ್ಲೆ ನಂಬರ್ ಒನ್ ಗ್ರಾಮ ಎಂದು ಗುರುತಿಸಿಕೊಳ್ಳುವ ಅವಕಾಶ ಪ್ರತೀ ಗ್ರಾಮಕ್ಕೂ ಒದಗಿ ಬರಲಿ.
No comments:
Post a Comment