ಬೆಳೆಯುತ್ತಿರುವ ತಾಂತ್ರಿಕಮಯವಾದ ಆಧುನಿಕ ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿದ್ದು, ಶಿಕ್ಷಣ ಕ್ಷೇತ್ರವೂ ಕ್ಷಿಪ್ರಗತಿಯಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಜ್ಞಾನದ ಜೊತೆಗೆ ವ್ಯಕ್ತಿತ್ವದ ನಿರ್ಮಾಣಕ್ಕೆ ಕಲಿಕೆ ಅನ್ನುವಂತಹದು ಅತ್ಯಗತ್ಯವಾದದ್ದು. ಹಲವಾರು ಸಾಮಾಜಿಕ ಚಿಂತಕರು, ದಾರ್ಶನಿಕರು ಸಾಮಾಜಿಕ ಪರಿವರ್ತನೆಗೆ ಶೈಕ್ಷಣಿಕ ಜಾಗೃತಿ ಹಾಗೂ ಮಹತ್ವವನ್ನು ನೀಡಿರುವುದು ಇತಿಹಾಸದಲ್ಲಿ ಉಲ್ಲೇಖನೀಯವಾಗಿದೆ. ಪ್ರಾಚೀನ ಕಾಲದಲ್ಲಿ ಜ್ಞಾನಕ್ಕೋಸ್ಕರ ಪಡೆಯುತ್ತಿದ್ದ ಶಿಕ್ಷಣ ಇಂದು ವ್ಯಾಪಾರೀಕರಣದ ಮನೋಭಾವನೆ ಬೆಳೆದಿರುವುದು ಚಿಂತನಾರ್ಹವಾಗಿದೆ. ಈ ಕಾರಣದಿಂದ ಇಂದು ಹಲವಾರು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡು ಸೇವೆಯ ಹೆಸರಿನಲ್ಲಿ ವ್ಯವಹಾರದ ಮಟ್ಟಕ್ಕೆ ಬೆಳೆದಿರುವುದು ಶೋಚನೀಯವಾಗಿದೆ.
ಇಂದು ಸರಕಾರಿ, ಅನುದಾನಿತ, ಅನುದಾನರಹಿತ ಎಂಬ ವರ್ಗ ಬೇಧ ಭಾವಗಳು ಬೆಳೆದಿದೆ. ಸರಕಾರಗಳು ಶೈಕ್ಷಣಿಕ ಗುಣಮಟ್ಟದಲ್ಲಿ ಏಕರೂಪತೆ ಮತ್ತು ಸಮಾನತೆಯನ್ನು ತರದಿರುವುದೇ ಈ ರೀತಿಯ ವರ್ಗೀಕರಣಕ್ಕೆ ಕಾರಣವಾಗಿದೆ. ಈ ರೀತಿಯ ಅಸಮಾನತೆಗಳಿಂದಾಗಿ ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸರಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯದ ಭಾವನೆ ಬೆಳೆದಿರುವುದು ಸರಕಾರಿ ಶಿಕ್ಷಣ ಸಂಸ್ಥೆಗಳ ಅಸ್ಥಿತ್ವದ ಪ್ರಶ್ನೆಯಾಗಿದೆ.
ಹಲವಾರು ಗಣ್ಯ ನೇತಾರರಿಗೆ ಶಿಕ್ಷಣ ನೀಡಿ ಈ ರಾಷ್ಟ್ರದ ನಾಯಕರನ್ನಾಗಿ ಬೆಳೆಸಿದ ಸರ್ಕಾರಿ ಶಾಲೆಗಳು ಇಂದು ಬಡವರಿಗೆ ಮಾತ್ರ ಸೀಮಿತವಾಗಿ ಬಡವರ ಶಾಲೆಯೆಂದೆ ಅಭಿಪ್ರಾಯ ಮೂಡಿದೆ. ಸರ್ಕಾರಿ ಮತ್ತು ಕನ್ನಡ ಮಾಧ್ಯಮ ಶಾಲೆಗಳಿಗೆ ಇಂದು ಜನರು ನಿರುತ್ಸಾಹ ತೋರುತ್ತಿರುವುದು ಪರಭಾಷೆಯ ಅತಿಯಾದ ವ್ಯಾಮೋಹವನ್ನು ತಿಳಿಸುತ್ತದೆ. ಇದರಿಂದ ಬೆಳೆದಿರುವ ಉದ್ಯೋಗಾಧಾರಿತ ಶಿಕ್ಷಣ ,ಇಂದು ಇಂಗ್ಲೀಷ್ ಮಾಧ್ಯಮವೇ ಬದುಕು ರೂಪಿಸಿಕೊಡುತ್ತದೆ ಎಂಬ ಭಾವನೆ ಬೆಳೆಯುತ್ತಿದೆ. ಆದರೆ ವಾಸ್ತವಿಕವಾಗಿ ಭಿನ್ನವಾದುದು. ಕನ್ನಡ ಮಾಧ್ಯಮ, ಸರ್ಕಾರಿ ಶಾಲೆಗಳು ಕೂಡಾ ಗುಣಮಟ್ಟದಲ್ಲಿ ಶಿಕ್ಷಣ ನೀಡಬಲ್ಲುದು. ವಿದ್ಯಾರ್ಥಿಗಳ ಪ್ರತಿಭೆ, ಅಭಿರುಚಿ ಗುರುತಿಸಿ ಪ್ರೋತ್ಸಾಹ ನೀಡಿ ಸರ್ವತೋಮುಖ ಅಭಿವೃದ್ಧಿಯಾಗಲು ಸರ್ಕಾರಿ ಶಾಲೆಗಳಿಂದಲೂ ಸಾಧ್ಯವಾಗಿದೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಪಾತ್ರವು ಇದೆ. ಗ್ರಾಮಸ್ಥರಲ್ಲಿ ‘ನನ್ನ ಗ್ರಾಮ ನಮ್ಮ ಶಾಲೆ’ ಎಂಬ ಅಭಿಮಾನ ಮೂಡಿದಾಗ ಒಂದು ಶಿಕ್ಷಣ ಸಂಸ್ಥೆ ಬೆಳೆಯಲು ಸಾಧ್ಯ. ಪ್ರಾಥಮಿಕ ಶಾಲೆಯ ಮುಖಾಂತರ ಸಮಾಜದ ಬೇರೆ ಬೇರೆ ವರ್ಗದ ಜನರನ್ನು ಒಂದುಗೂಡಿಸಲು ಒಂದು ವೇದಿಕೆಯಾಗಿದೆ. ಒಂದು ಶಿಕ್ಷಣ ಸಂಸ್ಥೆಯು ವಿದ್ಯಾದೇಗುಲವಾಗಿದೆ. ಅಲ್ಲಿ ಧರ್ಮ ಜಾತಿ ವರ್ಗಗಳ ಎಲ್ಲೆಯನ್ನು ಮೀರಿ ಸರ್ವರಿಗೂ ಜ್ಞಾನವನ್ನು ನೀಡುವ ಭಂಡಾರವಾಗಿದೆ. ಊರಿನ ಹಿರಿಯರು ಹಾಕಿದ ಭದ್ರ ಅಡಿಪಾಯದಿಂದ ಒಂದು ಸಂಸ್ಥೆಯಾಗಿ ಬೆಳೆದು ಎಲ್ಲರನ್ನೂ ಅಕ್ಷರಸ್ಥರನ್ನಾಗಿ ಮಾಡುವ ಕೇಂದ್ರವಾಗಿದೆ.
ಇಂದಿನ ಶಿಕ್ಷಣ ವ್ಯವಸ್ಥೆಯು ಒಂದು ರಥದ ನಾಲ್ಕು ಚಕ್ರವಿದ್ದಂತೆ, ಒಂದೊಂದು ಚಕ್ರವು ವಿದ್ಯಾರ್ಥಿ, ಶಿಕ್ಷಕರು, ಪೋಷಕರು, ಆಡಳಿತ ಮಂಡಳಿಯಾಗಿದ್ದು, ನಾಲ್ಕು ಚಕ್ರಗಳು ಸರಿಯಾದ ದಿಕ್ಕಿನಲ್ಲಿ ಚಲಿಸದಿದ್ದರೆ ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ತೊಡಕಾಗುತ್ತದೆ. ಮುಂದಿನ ಎರಡು ಚಕ್ರಗಳು ಶಿಕ್ಷಕ ಮತ್ತು ವಿದ್ಯಾರ್ಥಿಯಾದರೆ ಹಿಂದಿನಲ್ಲಿ ಪೋಷಕರು ಮತ್ತು ಆಡಳಿತ ಮಂಡಳಿ ಶಾಲೆಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಗುಣಮಟ್ಟದ ನೀತಿ ನಿರೂಪಣೆಯಲ್ಲಿ ಪ್ರಮುಖರಾಗುತ್ತಾರೆ.
ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು, ಹಳೆವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯವರು ಉತ್ಸಾಹದಿಂದ ಭಾಗವಹಿಸುವ ಮೂಲಕ ಶಾಲೆಯ ಸರ್ವತೋಮುಖ ಬೆಳವಣಿಗೆಯಾಗುವುದು. ಜೊತೆಗೆ ಗ್ರಾಮಸ್ಥರೆಲ್ಲ ವಿವಿಧ ರೀತಿಯಲ್ಲಿ ಶಿಕ್ಷಕರೊಂದಿಗೆ ಕೊಂಡಿಯಾಗಿ, ಮಾರ್ಗದರ್ಶಕರಾಗಿ ಬೆರೆತು, ಶಾಲೆಯೊಂದು ಸಂಬಂಧವನ್ನು ಬೆಸೆಯುವ ಕೇಂದ್ರವಾಗಬೇಕು. ಶಾಲೆಯ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಪಕ್ಷಪಾತಗಳು ಬಾರದೆ ಎಲ್ಲರೂ ಏಕಮನಸ್ಸಿನಿಂದ ಸಂಸ್ಥೆಗೆ ಶ್ರಮಿಸಿದರೆ ಸಾಧನೆಯತ್ತ ಬೆಳೆಂiiಲು ಸಾಧ್ಯ.
ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಭ್ರಷ್ಟಚಾರ ರಹಿತವಾಗಿ ಉಪಯೋಗಿಸುವ ನಿರ್ಮಲ ಮನಸ್ಸುಗಳು ಬೆಳೆಯಬೇಕಾದುದು ಇಂದು ಅಗತ್ಯವಾಗಿದೆ. ಗ್ರಾಮದ ವಿದ್ಯಾಕೇಂದ್ರದ ಬೆಳವಣಿಗೆಯಲ್ಲಿ ಸ್ಥಳೀಯ ಸಂಸ್ಥೆಗಳು ಕೂಡಾ ತನ್ನದೆ ಆದ ಕೊಡುಗೆಯನ್ನು ನೀಡುವ ಮುಖಾಂತರ ಸಾಮಾಜಿಕವಾಗಿಯೂ ಬೆಳೆಯಲು ಸಾಧ್ಯವಾಗಿದೆ. ಸ್ಥಳಿಯ ಸಂಸ್ಥೆಗಳು ಕೂಡ ಶಾಲೆಯ ಜೊತೆಗೂಡಿ ಸಮುದಾಯದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ
ಊರಿನ ಶಾಲಾ ವಾರ್ಷಿಕೋತ್ಸವವೆಂದರೆ ಕೇವಲ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ ಶಾಲಾಮಕ್ಕಳನ್ನು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಮತ್ತುಪ್ರೋತ್ಸಾಹಿಸುವ ವೇದಿಕೆಯಾಗಬೇಕು. ಹಳೆ ವಿದ್ಯಾರ್ಥಿಗಳು ಮಾತೃಸಂಸ್ಥೆಯ ಪೋಷಕರು. ಬಾಲ್ಯ ಜೀವನವನ್ನು ಮೆಲುಕು ಹಾಕುತ್ತಾ ಶಾಲೆಯ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸುವ ಮುಖಾಂತರ ಶಾಲೆಯ ಬಗ್ಗೆ ಪ್ರೀತಿ ಇಟ್ಟು ಬೆಳೆಸಬೇಕು. ಸಂಸ್ಥೆಯ ಬೆಳವಣಿಗೆ ಹಂತದಲ್ಲಿ ಏಳು ಬೀಳು ಸಹಜ, ಸಮಸ್ಯೆ ಅಡಚಣೆಗಳನ್ನು ಎದುರಿಸಿ ಶಾಲಾಭಿವೃದ್ಧಿಯಲ್ಲಿ ಕೈಜೋಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವ ಈ ಸಂದರ್ಭದಲ್ಲಿ ಗುಣಮಟ್ಟ ಮತ್ತು ಸೌಲಭ್ಯಗಳ ಕಡೆಗೆ ಸರ್ಕಾರ ಗಮನ ಹರಿಸಿದರೆ ಸುವರ್ಣ ಮಹೋತ್ಸವದತ್ತ ಸಾಗುತ್ತಿರುವ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಆ ಮೂಲಕ ಶಿಕ್ಷಣ ಸಂಸ್ಥೆಗಳ ಮಧ್ಯೆ ಸ್ಪರ್ಧಾತ್ಮಕ ಮನೋಭಾವ ಬೆಳೆದಿರುವ ಇಂದು ಉತ್ತಮ ಶಿಕ್ಷಣವನ್ನು ನೀಡಲು ಸಾಧ್ಯ, ಜೊತೆಗೆ ಮಕ್ಕಳ ಮೇಲೆ ಶಿಕ್ಷಣದ ಹೊರೆಯನ್ನು ಕಡಿಮೆಗೊಳಿಸಿ ಅವರ ಬಾಲ್ಯದಸವಿಯನ್ನು ಅನುಭವಿಸಲು ಪ್ರತಿಭೆಯನ್ನು ಬೆಳೆಸಲು ಪ್ರಾಥಮಿಕ ಶಿಕ್ಷಣ ಸಂಸ್ಥೆಯ ಕಾರ್ಯ ಪ್ರಮುಖವಾದುದು.

