Saturday, 2 April 2011

ಸಮುದಾಯಗಳ ಅಸ್ಥಿತ್ವ ಮತ್ತು ಪ್ರತಿಭಟನೆಯ ಅಭಿವ್ಯಕ್ತವಾಗಿ ಪುರುಷರ ಕುಣಿತ


     ತುಳುನಾಡು ವಿಶಿಷ್ಟ ಸಂಸ್ಕೃತಿಯುಳ್ಳ ನಾಡು. ಇಲ್ಲಿ ಹಲವು ಜನಾಂಗಗಳು ಬಾಳಿ ಬೆಳೆದು ತನ್ನ ಸಂಸ್ಕೃತಿಯನ್ನು ನಾಡಿನಾದ್ಯಂತ ಪಸರಿಸಿದವು. ಮಾನವನು ತನ್ನ ಮೂಲ ದಿಂದ ಬೆಟ್ತ ಗುಡ್ದ ಕಾಡುಗಳಲ್ಲಿ ಬದುಕಿ ತನ್ನದೇ ಆದ ಆಚರಣೆಗಳನ್ನು ರೂಪಿಸಿಕೊಂಡು ಒಂದು ಚೌಕಟ್ಟನ್ನು ನಿರ್ಮಿಸಿದನು. ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗುತ್ತಾ ಕುಟುಂಬ, ಸಮುದಾಯ ಎಂಬ ಕಲ್ಪನೆಗಳೊಂದಿಗೆ ಒಂದು ಪ್ರಾದೇಶಿಕ ವ್ಯಾಪ್ತಿಯನ್ನು ಸ್ಥಾಪಿಸಿ ತನ್ನ ಚಕ್ರಾದಿಪತ್ಯವನ್ನು ಪ್ರಾರಂಭಿಸಿದನು.
       ಮೂಲ ಜನಾಂಗಗಳು ತನ್ನ ಸಾಮುದಾಯಿಕ ಏಕತೆಯನ್ನು ಹೊಂದಿದ್ದವು. ಆದರೆ ಬೆಳೆಯುತ್ತಾ ಹೋದಂತೆ ವೃತ್ತಿ ಆಧಾರಿತವಾಗಿ ಅನೇಕ ಸಮುದಾಯಗಳು ಸೃಷ್ಟಿಯಾದವು. ವೃತ್ತಿಯಲ್ಲೂ ಕುಲ ಕಸುಬು ಎಂದು ಬೆಳೆದು ಆ ಸಮುದಾಯದವರೆ ಮಾಡಬೇಕು ಎಂಬ ಅನುಶಾಸನ ಬೆಳೆದು ಬಂದಿತು. ಅಲ್ಲಿ ಎಲ್ಲಿಯೂ ಸಮುದಾಯಗಳ ಮದ್ಯೆ ಧರ್ಮದ ನಂಬಿಕೆಯಿರಲಿಲ್ಲ. ಸಮುದಾಯವೆನ್ನುವುದು ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ನಾವು ಎಂಬ ಭಾವನೆಯೊಂದಿಗೆ ವೃತ್ತಿ ಆಧಾರಿತವಾಗಿತ್ತೇ ವಿನ: ಜಾತಿ ಎನ್ನುವ ಸಂಕುಚಿತ ವ್ಯಾಪ್ತಿಯನ್ನು ನಾವು ಕಾಣುವುದಿಲ್ಲ. ಕುಲ ಕಸುಬು ನಡೆಸುತ್ತಾ ಬೆಳೆದು ಬಂದ ಸಮುದಾಯಗಳು ಒಟ್ಟಾಗಿ ಸಮಾಜ ಎಂಬ ಕಲ್ಪನೆಯನ್ನು ಬುದ್ಧಿವಂತ ನಾದ ಮಾನವ ಕಟ್ಟಿಕೊಂಡ. ಇಂದು ಬೆಳೆದು ನಿಂತ ಜಾತಿ, ಧರ್ಮ, ಮತಗಳ ನಡುವೆ ಮತ್ತೊಮ್ಮೆ ಸಮುದಾಯಗಳ ಅಸ್ಥಿತ್ವ ಗಟ್ಟಿಯಾಗುತ್ತ ಸಾಗುತ್ತಿವೆ. ಇಂದು ಎಲ್ಲ ಜಾತಿಗಳ ಜೀವನಾವರ್ತನದ ಆಚರಣೆಗಳು ಹಾಗೂ ಸಂಸ್ಕೃತಿ ಗಳು ಏಕರೂಪ ದಿಕ್ಕಿನಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ಸಮುದಾಯಗಳ ಅಸ್ಥಿತ್ವದ ಪ್ರಶ್ನೆ ಮೂಡುತ್ತಿದೆ. ಒಂದು ಕಡೆಯಲ್ಲಿ ಜಾತಿ ವ್ಯವಸ್ಥೆಯು ತೀವೃವಾಗಿ ಬಲಗೊಳ್ಳುತ್ತಿದೆ.ಇನ್ನೊಂದು ಕಡೆಯಲ್ಲಿ ತನ್ನ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿರುವುದು ಇದೊಂದು ರೀತಿಯಲ್ಲಿ ನಡೆಯುತ್ತಿರುವ ವೈರುದ್ಯ ಬೆಳವಣಿಗೆಯಾಗಿದೆ.
      ಈ ದೃಷ್ಟಿಯಲ್ಲಿ ತುಳುನಾಡಿನ ಮೂಲ ಸಮುದಾಯಗಳ ಸಾಂಸ್ಕೃತಿಕ ಅಸ್ಥಿತ್ವವನ್ನು ತೆರೆದು ನೋಡಿದಾಗ ಇಲ್ಲಿನ ಸಮುದಾಯಗಳೆಲ್ಲವೂ ತನ್ನ ಕಸುಬುಗಳಿಂದ ಗುರುತಿಸಿಕೊಳ್ಳುತ್ತಿದ್ದವು. ಇಲ್ಲಿನ ಸಮುದಾಯಗಳಲ್ಲಿ ಪೂಜೆಯ ಭಟ್ರು ,ಗುತುದ ಶೆಟ್ರು , ಕಲಿತ ಪೂಜಾರಿ ,ಮಡಿ ಮಾಡುವ ಮಡಿವಾಳ ಪಂಚಾಯತಿಯ ಗೌಡ ,ತಲೆಕೂದಲು ಕತ್ತರಿಸುವ ಭಂಡಾರಿ, ಎಣ್ನೆ ತೆಗೆಯುವ ಗಾಣಿಗ, ನರ್ಸಣ್ಣ ,ದಾಸರು ,ಜೈನ, ಕೊರಗರು, ನಾಯ್ಕರು, ಮಲೆಕುಡಿಯರು ತನ್ನ ಕುಲ ಕಸುಬಿನಿಂದಾಗಿ ಈ ನಾಡಿನಲ್ಲಿ ತನ್ನ ಸಾಂಸ್ಕೃತಿಕ ಅಸ್ಥಿತ್ವವನ್ನು ಹೊಂದಿದ್ದವು. ಅದೇ ರೀತಿ ಕೊಂಕಣಿ ಜನಾಂಗದವರು ವ್ಯಾಪಾರಕ್ಕೆ ,ಮೀನು ಹಿಡಿಯುವ ಮೊಗವೀರರು, ಮಡಕೆ ಮಾಡುವ ಕುಂಬಾರರು, ಮರದ ಕೆಲಸ ಮಾಡುವ ವಿಶ್ವಕರ್ಮರು ಪ್ರಮುಖರಾಗಿದ್ದಾರೆ.
 ಧರ್ಮದ ಕಲ್ಪನೆಯೇ ಇಲ್ಲದ ಆ ಕಾಲದಲ್ಲಿ ತುಳುನಾಡಿನಲ್ಲಿ ವೀಳ್ಯದೆಲೆ ಮಾರುವ ಕ್ರೈಸ್ತರಾಗಿ , ವ್ಯಾಪಾರ ಮಾಡುವ ಬ್ಯಾರಿ ಜನಾಂಗ  ಎಂಬುವುದಾಗಿ ಒಂದು ಮತದ ಅಡಿಯಲ್ಲಿ ಕಂಡುಕೊಳ್ಳದೆ ಸಮುದಾಯಗಳೆಂಬುವುದಾಗಿ ಗುರುತಿಸಲ್ಪಟ್ಟಿದ್ದವು. 
        ನಂತರ ಜಾತಿ ಧರ್ಮ ಮತಗಳೆಂಬ ಸಾಮಾಜಿಕ ಬಂಧನ ನಿರ್ಮಾಣವಾಗುತ್ತಾ ಹೋದಾಗ ವರ್ಗಗಳೆಂಬ ಶ್ರೇಣೀಕೃತ ವ್ಯವಸ್ಥೆ ರೂಪುಗೊಂಡಿತು. ಪ್ರಾಚೀನ ಇತಿಹಾಸದಲ್ಲಿ ಈ ವರ್ಗಗಳ ಸ್ಥಾನ ಪಲ್ಲಟವಾದಾಗ ಬಹುತೇಕ ವಿದೇಶೀಯರ ದಾಳಿ ಸಂದರ್ಭದಲ್ಲಿ ಉತ್ತರದಿಂದ ದಕ್ಷಿಣದ ಕಡೆಗೆ ವಲಸೆ ಬಂದ ಸಮುದಾಯಗಳು ಸಂಸ್ಕೃತಿ, ಆಚರಣೆಯಲ್ಲಿ ಉಚ್ಚ ವರ್ಗದವರೆಂದು ಪ್ರತ್ಯೇಕಿಸಲ್ಪಟ್ಟವು. ತುಳುನಾಡಿನ ಶಿಷ್ಟ ಸಂಸ್ಕೃತಿಗೂ, ವೈದಿಕ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸಗಳಿದ್ದ ಆ ಸಂಧರ್ಭದಲ್ಲಿ ವರ್ಗ ಅಸಮಾನತೆಗಳು ಸೃಷ್ಟಿಯಾದವು. ಮೂಲ ಜನಾಂಗ ಮತ್ತು ವಲಸೆ ಬಂದ ಪುರೋಹಿತಶಾಹಿ ವರ್ಗದ ನಡುವೆ ಸಾಕಾಷ್ಟು ಸಂಘರ್ಷಗಳು ಮೇಲ್ನೋಟಕ್ಕೆ ನಡೆಯದಿದ್ದರೂ ಪ್ರತ್ಯೇಕವಾಗಿ ತುಳುನಾಡಿನ ಸಮುದಾಯಗಳು ಒಂದು ವೇದಿಕೆಯನ್ನು ಕಲ್ಪಿಸಿಕೊಂಡು, ಪೌರೋಹಿತ ಪರಂಪರೆ, ವೈದಿಕ ಸಂಸ್ಕೃತಿಯ ವಿರುದ್ಧ ಪ್ರತಿಭಟನೆ, ನಿರಸನವನ್ನು ನಡೆಸಿದವು. ಹೊಸದಾಗಿ ಒಂದು ಆಚರಣ ಪದ್ಧತಿಗಳನ್ನು ಸಮುದಾಯಗಳ ಮೇಲೆ ಹೇರಳ್ಪಟ್ಟಾಗ, ಸಾಮಾನ್ಯವಾಗಿ ವಿರೋಧಿಸುವುದು ಜನಾಂಗಗಳ ಉಳಿವಿನ ದೃಷ್ಟಿಯಿಂದ ಕರ್ತವ್ಯವಾಗಿದೆ. ಅಂತಹ ಕಾಲಘಟ್ಟದಲ್ಲಿ ತುಳುನಾಡಿನ ಎಲ್ಲ ಜನ ವರ್ಗ ಸಮುದಾಯಗಳು ಒಂದು ಪರಂಪರೆಯ ವಿರುದ್ಧ ಅಣಕಿಸುವದರ ಮೂಲಕ ತನ್ನ ಸಾಂಸ್ಕೃತಿಕ ಅಸ್ತಿತ್ವಕ್ಕಾಗಿ ಒಂದು ಮಾರ್ಗವನ್ನು ಕಂಡುಹಿಡಿದರು. ಆ ಮಾರ್ಗವೇ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಚಲಿತದಲ್ಲಿರುವ, ಪ್ರದರ್ಶನಗಳ್ಳುತ್ತಿರುವ ಜಾನಪದ ನೃತ್ಯ ಪುರುಷರ ಕುಣಿತ.
         ಜನ ಸಮುದಾಯಗಳು  ದೈವಿಕ ನಂಬಿಕೆಯನ್ನು ಸೃಷ್ಟಿಸಿಕೊಂಡು ತನ್ನ ಕುಲಕಸುಬುಗಳ ಸಾಮೂಹಿಕ ಪ್ರದರ್ಶನದೊಂದಿಗೆ ತನ್ನ ಗುರುತಿಸುವಿಕೆಯನ್ನು ಒಂದು ವಿಶಿಷ್ಟ ಕುಣಿತದ ಮೂಲಕ ಜನ ವರ್ಗಗಳಿಗೆ ತೋರಿಸಿಕೊಟ್ಟವು.
ಪುರುಷರ ಕುಣಿತವು ಬೆಳ್ತಂಗಡಿ ತಾಲೂಕಿನಲ್ಲಿ ವಿಶೇಷವಾಗಿ ಸುಗ್ಗಿ ಹುಣ್ಣಿಮೆಯ ಸಂಧರ್ಭದಲ್ಲಿ ನಾಲ್ಕು ದಿವಸ ಮನೆ ಮನೆಗೆ ಹೋಗುವ ಜಾನಪದ ತಂಡದ ಕುಣಿತ. ಈ ಕುಣಿತವು ನೋಡಲು ಮನೋರಂಜನಾತ್ಮಕವಾಗಿ ಕಂಡರೂ ಹಲವಾರು ಚಿಂತನೆಗೆ ಅವಕಾಶ ಮಾಡಿಕೊಡುತ್ತದೆ. ಮೂಲ ಸುಳ್ಯತಾಲೂಕಿನ ಸಿದ್ಧವೇಷಕ್ಕೆ ಹೋಲುತ್ತದೆಯಾದರೂ ಪುರುಷರ ವೇಷಕ್ಕೆ ಸ್ವಲ್ಪ ಭಿನ್ನತೆಯಿದೆ. ಇಲ್ಲಿನ ಕುಣಿತಗಳಲ್ಲಿ ಪ್ರತಿಭಟನೆ, ಅಣಕದ ಜೊತೆಗೆ ಸಮುದಾಯಗಳ ಕುಲಕಸುಬುಗಳ, ಜೀವನಾವರ್ತದ ಆಚರಣೆಗಳ ಪ್ರದರ್ಶನ ಕಂಡು ಬರುತ್ತದೆ. ಇದೇ ರೀತಿ ಕಾರ್ಕಳದಲ್ಲಿ ಮಾಯಿದ ಪುರುಷೆರ್ ಎಂಬುದಾU ಸ್ವಲ್ಪ ಭಿನ್ನವಾದ ಕುಣಿತವನ್ನು ಮಾಯಿ ತಿಂಗಳಲ್ಲಿ ನಡೆಸುತ್ತಾರೆ. ಸುಗ್ಗಿದ ಪುರುಷೆರ್ ವಿಶೇಷವಾಗಿ ಬೆಳ್ತಂಗಡಿ ತಾಲೂಕಿನ ಶಿರ್ಲಾಲ್, ಕುತ್ಲುರು, ಸುಲ್ಕೇರಿಮೊಗ್ರು,ಮೀಯಾರು, ಇನ್ನೂ ಕೆಲವು ಗ್ರಾಮಗಳಲ್ಲಿ ಈಗಲೂ ಪ್ರಚಲಿತದಲ್ಲಿರುವ ,ಪ್ರದರ್ಶನಗೊಳ್ಳುತ್ತಿರುವ ಜಾನಪದ ಕುಣಿತ.
       ಪುರುಷರು ಕದ್ರಿ ಮಠದಿಂದ ಬಂದವರು ಎಂಬ ನಂಬಿಕೆ ಜನರಲ್ಲಿ ಇಂದಿಗೂ ಇದೆ,ಒಟ್ಟು ನಾಲ್ಕು ದಿವಸ ಗ್ರಾಮದ ಪ್ರತಿ ಮನೆಗೆ ತೆರಳಿ ಕುಣಿತವನ್ನು ಪ್ರದರ್ಶಿಸಿ, ಅದಕ್ಕೆ ಸಂಭಾವನೆ ರೂಪವಾಗಿ ಅಕ್ಕಿ, ತೆಂUನಕಾಯಿ, ಹಣವನ್ನು ಪಡೆದುಕೊಳ್ಳುತ್ತಾರೆ. ಮನೆಗೆ ಪುರುಷರು ಬಂದಾಗ ಯಜಮಾನ ಬಾಗಿಲು ತೆಗೆದು ಇಡಬೇಕು ಎಂಬ ನಂಬಿಕೆಯಿದೆ ಒಂದು ವೇಳೆ ತೆರೆಯದಿದ್ದರೆ ಪುಂಡು ಪುರುಷರು ಬಾಯಲ್ಲಿ ಹೇಳಿದ ಮಾತೇ ಶಾಪವಾಗುತ್ತದೆ ಎಂಬ ನಂಬಿಕೆಯು ಜನರಲ್ಲಿ ಇದೆ. ಈ ರೀತಿ ನಡೆದ ಹಲವಾರು ಘಟನೆ ಇವೆ. ಪುರುಷರ ಕುಣಿತದಲ್ಲಿ ಬಳಸುವ ಹಾಡಿನಲ್ಲಿ ಕದ್ರಿ ಮಠದಿಂದ ನಾವು ಬಂದವರು ಎಂ  ಮಾತಿದೆ,ಕದ್ರಿ ಮಂಜುನಾಥೇಶ್ವರನ ಆಶೀರ್ವಾದ, ಅನುಗ್ರಹ ಬೇಡುತ್ತಾ ಪುರುಷ ಕುಣಿತದ ಸಂಪ್ರದಾಯವು ಒಂದುದೈವಿಕ ನಂಬಿಕೆಯಾಗಿದೆ.
     ಗ್ರಾಮಗಳಲ್ಲಿ ಪ್ರಾದೇಶಿಕ ಭಿನ್ನತೆಯು ಕಂಡು ಬಂದರೂ ಉದ್ದೇಶ,ನಂಬಿಕೆ ಒಂದೇ ಆಗಿದೆ.
ಸಿದ್ದುಲಿಂಗ ಮುದ್ದುಲಿಂಗ|ಪುರುಷವೇಸೋ||
ನಾವು ಯಾವೂರು ಯಾವ ತಳ|ಪುರುಷವೇಸೋ||
ನಾವು ಕಾಶಿಯ ತಳದವು|ಪುರುಷವೇಸೋ||
ಎಂಬುದು ಕಾಶಿಯಿಂದ ಬಂದ ಪುರುಷ ಮಕ್ಕಳು ಎಂಬುದಾಗಿ ತಿಳಿಯುತ್ತದೆ.
      ಪುರುಷರು ಬಂದ ನಂಬಿಕೆಯನ್ನು ಹಾಡಿನ ರೂಪದಲ್ಲಿ ಮಾತ್ರ ಈ ರೀತಿ ಪ್ರಸ್ತುತಪಡಿಸಿದರೆ, ಕುಣಿತದಲ್ಲಿ ಪ್ರದರ್ಶನಗೊಳ್ಳುತ್ತಿರುವ ವೇಷಗಳು, ಮನೋರಂಜನಾತ್ಮಕವಾಗಿ ಕಂಡುಬರುತ್ತದೆ.ತುಳುನಾಡಿನ ಎಲ್ಲ ಸಮುದಾಯಗಳ, ಜೀವನಾವರ್ತನ ಆಚರಣೆ, ಕುಲಕಸುಬುಗಳು ತಾವೇ ಕಟ್ಟಿಕೊಂಡ ವೇದಿಕೆಯೆಂಬ ಅಂಗಳದಲ್ಲಿ ಭಿತ್ತರವಾಗುತ್ತದೆ. ಪುರುಷರ ಕುಣಿತದಲ್ಲಿ ಪಾಲ್ಗೊಳ್ಳುವ ವೇಷಗಳೆಂದರೆ, ಭಟ್ರು, ಮೂರು ಜನ ಮುಸ್ಲಿಂ ಸಾಹೇಬರು,ಕೊಡಮಣಿತ್ತಾಯ ಪಾತ್ರಿ,ದೇವರ ಉತ್ಸವ ಮೂರ್ತಿಹೊತ್ತ ವ್ಯಕ್ತಿ, ಸಿರಿ ಕುಮಾರ, ಮೂರು ಜನ ಒಣಗಿದ ಬಾಳೆ ಎಲೆ ಸುತ್ತಿದ ಪಂಜುರ್ಲಿ ಭೂತಗಳು, ಹೆಬ್ಬಾರರು, ಪೋಲಿಸ್, ಭೂತದ ವೇಷ, ಅದರ ಜೊತೆಗೆ ಬಂಟ ದೈವ ಬಸವನ ಜೊತೆ ನರ್ಸಣ್ಣ, ದಾಸವ, ಬಚ್ಚಿರೆದ ಪೊರ್ಬುಲು, ಮದಿಮಾಳ್ ವೇಷ ,ದುಡಿನಲಿಕೆ, ಹಾವಾಡಿಗ, ಮೀನುಮಾರುವವ, ಮಾವಿನಕಾಯಿ ಮಾರುವ ವ್ಯಕ್ತಿ, ಡೊಂಬರಾಟನಡೆಸುವ ವ್ಯಕ್ತಿ, ಬಳೆಮಾರುವ ಬಳೆಗಾರ, ಹೀಗೆ ಸಮುದಾಯಗಳ ವೃತ್ತಿ ಕುಣಿತಗಳ ಪ್ರದರ್ಸನವು ಪ್ರಹಸನ ಮತ್ತು ಕುಣಿತಗಳ ಮೂಲಕ ಮನೆ ಮನೆಗಲಲ್ಲಿ ಪ್ರದರ್ಶಿಸುತ್ತಾರೆ.ಈ ಪುರುಷರ ಕುಣಿತವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯಗಳ ಪಾಲ್ಗೊಳ್ಳುವಿಕೆಯಿಂದ ನಡೆಯುತ್ತದೆ. ಮೂರು ದಿನ ಪ್ರತಿ ಮನೆಗೆ ಪುರುಷರು ಹೋಗುತ್ತಾರೆ ನಂತರ ನಾಲ್ಕನೇ ಯ ದಿನ ಗ್ರಾಮದ ಬಯಲಿನಲ್ಲಿ ಪುರುಷ ಪೂಜೆ ಎಂಬ ಕಾರ್ಯಕ್ರಮವನ್ನು ನಡೆಸುತ್ತಾರೆ. ತಂಡದ ಹಿರಿಯರು ಕದ್ರಿ ದೇವಸ್ಥಾನಕ್ಕೆ ಹೋಗಿ ತೀರ್ಥಪ್ರಸಾದ ತಂದು ಪುರುಷ ಪೂಜೆಯ ದಿನ ಎಲ್ಲರಿಗೂ ನೀಡಿ ರಾಶಿ ಪೂಜೆ ನಡೆಸುತ್ತಾರೆ, ರಾಶಿಪೂಜೆಯೆಂದರೆ ನಾಲ್ಕು ದಿನ ಪುರುಷ ಕುಣಿತಕ್ಕೆ ಬಂದ ಜನರ ಸಂಖ್ಯಾ ಬಲದಲ್ಲಿ ದಿನಕ್ಕೆ ಒಂದು ಸೇರು ಲೆಕ್ಕದಲ್ಲಿ ಕ್ವಿಂಟಾಲ್ ಗಿಂತ ಮೇಲೆ ಅವಲಕ್ಕಿಯನ್ನು ಪಂಚಕಜ್ಜಾಯ ಮಾಡಿ ರಾಶಿ ಹಾಕುತ್ತಾರೆ, ಅದಕ್ಕೆ ಪೂಜೆ ನಡೆಸಿ, ದೇವರ ಉತ್ಸವ ಮೂರ್ತಿಗೂ ಆರತಿ ಬೆಳಗಿಸಿ ಆ ದಿನದ ಕುಣಿತವನ್ನು ಪ್ರಾರಂಭಿಸುತ್ತಾರೆ. ಪೂಜೆಯ ಎಲ್ಲ ಸಂಪ್ರದಾಯವನ್ನು ಬ್ರಾಹ್ಮಣವೇಷ ಹಾಕಿದ ವ್ಯಕ್ತಿಯೆ ನಡೆಸುತ್ತಾರೆ.
        ಪುರುಷರ ಕುಣಿತದಲ್ಲಿ ಬರುವ ಸಾಂಪ್ರಾದಾಯಿಕ ಪಾತ್ರಗಳು, ಅಣಕ, ಪ್ರತಿಭಟನೆ, ತಮಾಷೆಯನ್ನು ಬಿಂಬಿಸುವಂತಿವೆ. ನೇರವಾಗಿ ವೈದಿಕ, ಪುರೋಹಿತಶಾಹಿ ಆಚರಣೆ, ನಂಬಿಕೆಗಳನ್ನು ವಿರೋದಾಭಾಸವಾಗಿ ಉಳಿದ ಪಾತ್ರಗಳು ಕಾಣುತ್ತವೆ. ದೇವರ ಉತ್ಸವಮೂರ್ತಿಗೆ ಬ್ರಾಹ್ಮಣ ವೇಷಧಾರಿಯು ಆಶ್ಲೀಲ ಪದಗಳಿಂದ ಪೂಜೆ ಮಾಡುವುದು ,ದೈವ, ಕೊಡಮಣಿತ್ತಾಯ ಪಾತ್ರಿಗೆ ವಿರುದ್ಧವಾಗಿ ನುಡಿಕಟ್ಟು ಕೊಡುವುದು ಕಂಡುಬರುತ್ತದೆ.
        ಈ ಕುಣಿತದಲ್ಲಿ ಪ್ರಧಾನ ಪಾತ್ರಧಾರಿಗಳು ಮೂರು ಜನ ಮುಸ್ಲಿಂ ಸಾಹೇಬರು, ತಲೆಗೆ ಮುಂಡಾಸು, ಅಂಗಿ, ಪ್ಯಾಂಟಿನಮೇಲೆ ಅರ್ಧ ಕಚ್ಚೆ, ಗೋಣಿಚೀಲದ ನೂಲಿನಿಂದ ಗಡ್ಡಧರಿಸಿ, ಬಿದಿರಿನ ದೊನ್ನೆ, ಹೊಟ್ಟೆಗೆ ಅಂಗಿಯೊಳಗೆ ತಲೆದಿಂಬು ಕಟ್ಟಿ ಹೊಟ್ಟೆ ದೊಡ್ಡದಾಗಿ ಕಾಣುವಂತೆ ವೇಷಧರಿಸಿ ಇಡೀ ಕುಣಿತದಲ್ಲಿ ಹಾಸ್ಯ ಮಾಡಿ ಪುರುಷರನ್ನು ಹುರಿದುಂಬಿಸುತ್ತಾರೆ. ಮುಸ್ಲಿಂ ಸಾಹೇಬರು, ಬ್ರಾಹ್ಮಣ ಪಾತ್ರಧಾರಿಗೆ ಜನೀವಾರದ ಬಳಕೆಗೆ ಅಣಕ ಮಾಡುವುದನ್ನು ನಾವು ಕಾಣಬಹುದು. ಪುಂಡು ಪುರುಷರಲ್ಲಿ ಪ್ರಮುಖವಾಗಿ ರೆಂಜಿರ್ ಹೂ, ಗೋವಸಂಪಗೆ ಹೂವಿನಿಂದ ಕಟ್ಟಿದ ಕಿರೀಟವನ್ನು ತಲೆಗೆ ಧರಿಸಿದ ಮಕ್ಕಳು. ತುಳುನಾಡು ಭೂತಾರಾಧನೆಯಲ್ಲಿ ವಿಶೇಷವಾಗಿ ನಂಬಿಕೆ ಇಟ್ಟಿದ್ದರು. ಪೂಜಿಸಿದರೂ ಪುರುಷರ ಕುಣಿತದಲ್ಲಿ ಆಶ್ಲೀಲ ಪಾಡ್ದನ ಹಾಗೂ ಪಾರಿಹೇಳುವ ಸಂಪ್ರದಾಯವಿದೆ. ನಿಜ ಜೀವನದಲ್ಲಿ ನಡೆಸುವ ಆಚರಣೆಗಳಲ್ಲಿ ಯಾವುದೂ ನಿಷೇಧವಿರುತ್ತದೊ ಅದನ್ನು ನಡೆಸುವ ಸಂಪ್ರದಾಯವಾಗಿದೆ.
    ಉಳಿದಂತೆ ಸಮುದಾಯದ ಮನೆತನ ಸಾರುವ ಹೆಬ್ಬಾರರು, ಸಿರಿ ಕುಮಾರನ ವೇಷ ಪ್ರತಿಧ್ವನಿಸುತ್ತದೆ.
ಒಂದು ಕಾಲಘಟ್ಟದಲ್ಲಿ ಇತರ ಊರುಕೇರಿಗಳಿಂದ ಜೀವನ ಸಾಗಿಸಲು ತುಳುನಾಡಿಗೆ ಆಗಮಿಸುತ್ತಿದ್ದ, ಮನೋರಂಜನೆಗೆ ಸಂಬಂಧಿಸಿದ ವೇಷಗಳಾದ, ಡೊಂಬರಾಟ, ಕರಡಿವೇಷ, ಹುಲಿವೇಷ, ಮಂಗ ಆಡಿಸುವವ, ಹಾವಾಡಿಗ, ನರ್ಸಣ್ಣ, ಬಳೆ ಮಾರುವ ಬಳೆಗಾರ, ಮೀನು ಮಾರುವ ಮರಕಾಳ, ವೀಳ್ಯ ಮಾರುವ ಪೊರ್ಬು, ಇವೆಲ್ಲವು ತಕ್ಷಣಕ್ಕೆ ಹಿಂದಿನ ಜೀವನ ಪದ್ದತಿಗಳನ್ನು  ಮೆಲುಕು ಹಾಕಿಸುತ್ತವೆ. ಇನ್ನು ಉಳಿದಂತೆ ಜೀವನಾವರ್ತನ  ಆಚರಣೆಯಾದ ವಿವಾಹ. ಹಿಂದಿನ ಮದುವೆಯ ಸಂಪ್ರದಾಯವನ್ನು ಹಾಸ್ಯ ಭರಿತವಾಗಿ ಸುಗ್ಗಿದ ಪುರುಷರು ಕಟ್ಟಿ ಕೊಡುತ್ತಾರೆ. ಆ ಮೂಲಕ ತುಳುವರ ಮದುವೆಯ ಪದ್ಧತಿಯನ್ನು ಪುರುಷರು ನೆನಪಿಸಿಕೊಡುತ್ತಾರೆ.
       ಪುರುಷ ಕುಣಿತದವರು ಮನೆಗೆ ಬಂದರೆ ಒಳ್ಳೆಯದು ಎಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಪುರುಷರು ಬಂದರೆ ಧನ ಸಂಪತ್ತು ಬರುತ್ತದೆ, ಸಕಲ ರೋಗ ರುಜಿನಗಳು ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ, ಕೃಷಿಗೆ ಸಂಬಂಧಿಸಿದ ತೊಂದರೆಗಳಿಗೆ ಹರಕೆ ಹೇಳಿದರೆ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಜನಪದರಲ್ಲಿ ತುಂಬಿದೆ.
ಒಟ್ಟಿನಲ್ಲಿ ಪುರುಷರ ಕುಣಿತದಿಂದ ಪ್ರತೀ ಮನೆಯು ಒಂದು ಹೊಸ ಹುರುಪಿನಲ್ಲಿ ಮನೋರಂಜನೆಯನ್ನು ನೀಡಿ ಗ್ರಾಮದ ಮಾರಿ ಓಡಿಸುವ, ಸಕಲ ಕಷ್ಟಗಳನ್ನು ದೂರ ಮಾಡುವ, ಸುಗ್ಗಿಯ ಸಮಯದಲ್ಲಿ ಕೃಷಿ ಸಂಬಂಧಿಸಿದ ಕೆಲಸಕಾರ್ಯ ಮುಗಿದು ಸಂಭ್ರಮ ಪಡುವ ಕಾಲವಾಗಿದೆ. ಆ ಮೂಲಕ ಮನೆಯಂಗಳದ ಸ್ವಚ್ಚತೆಯೊಡನೆ, ಮನಸ್ಸಿಗೆ ಮನೋರಂಜನೆಯನ್ನು ನೀಡುವ ಪುರುಷರ ಕುಣಿತವು ಒಂದು ಕಾಲಘಟ್ಟದಲ್ಲಿ ನಡೆದು ಹೋದ ಸಾಂಸ್ಕೃತಿಕ ಸಂಘರ್ಷವನ್ನು ಜನಪದರು ಕುಣಿತದ ಮೂಲಕ ಪ್ರಸ್ತುತಪಡಿಸಿದುದನ್ನು  ಮತ್ತು ಎಲ್ಲಾ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ತರುವ ಕಾರ್ಯವು ಜನಪದರಿಂದ ಸಾಧ್ಯವಾಗಿದೆ ಎನ್ನಬಹುದು.
                                                         
                                                                            



No comments:

Post a Comment